ಮೂಲಸೌಕರ್ಯವನ್ನು ಕಸಿದುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
RB NEWS
Bureau Report
ಮೂಲಸೌಕರ್ಯವನ್ನು ಕಸಿದುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಕಾರ್ಕಳ: ಮಂಗಳೂರು-ಕಾರ್ಕಳ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -೧೬೯ ಇದರ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಸಾಣೂರು ಗ್ರಾಮಸ್ಥರ ಮೂಲಸೌಕರ್ಯವನ್ನು ಕಸಿದುಕೊಂಡಿದೆ ಎಂಬ ಆರೋಪವು ವ್ಯಾಪಕವಾಗಿ ಕೇಳಿಬರುತ್ತಿದ್ದು, ಇಲ್ಲಿನ ಗ್ರಾಮಸ್ಥರು ಹೋರಾಟದ ಹಾದಿಗೆ ಇಳಿದಿದ್ದಾರೆ.
ಇದು ತಾಜಾಉದಾಹರಣೆಯಷ್ಟೇ….
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಸಾಣೂರಿನಲ್ಲಿ ಪದ್ಮನಾಭ ನಗರ-ಮುದ್ದಣ್ಣನಗರ ಸಂಪರ್ಕದ ರಸ್ತೆ ಅಭಿವೃದ್ಧಿಗೆ ಸಾಣೂರು ಗ್ರಾಮ ಪಂಚಾಯತ್ ಇದುವರೆಗೆ ಹಂತ ಹಂತವಾಗಿ ರೂ ೨೦ ಲಕ್ಷ ಅನುದಾನ ವಿನಿಯೋಗಿಸಿದೆ. ಇದರಲ್ಲಿ ಚರಂಡಿ, ಮಣ್ಣಿನ ರಸ್ತೆ, ಡಾಂಬರು ರಸ್ತೆ ಒಳಗೊಂಡಿದೆ. ೨೦೨೨ರಲ್ಲಿ ಶಾಸಕ ಸುನೀಲ್ಕುಮಾರ್ ಅವರ ಮುತುವರ್ಜಿಯಲ್ಲಿ ಶಾಸಕರ ನಿಧಿಯಿಂದ ರೂ.೨೫ ಲಕ್ಷವನ್ನು ವಿನಿಯೋಗಿಸಿ ಪದ್ಮನಾಭ ನಗರ- ಮುದ್ದಣ್ಣನಗರ ಸಂಪರ್ಕ ರಸ್ತೆಯನ್ನು ಕಾಂಕ್ರೀಟ್ಕರಣಗೊಳಿಸಲಾಗಿತ್ತು. ಇದರಿಂದ ಸುಮಾರು ೧೫೦ಕ್ಕೂ ಮಿಕ್ಕಿ ಮನೆಮಂದಿಯರಿಗೆ ಪ್ರಯೋಜನವಾಗಿದೆ. ಇದೇ ರಸ್ತೆಯಾಗಿ ಮುಂದುವರಿದರೆ ನಿಟ್ಟೆ ಪರಪ್ಪಾಡಿ ಸಂಪರ್ಕಿಸಬಹುದು.
೨೦ ಮೀಟರ್ ಕಾಂಕ್ರೀಟ್ಕರಣ ರಸ್ತೆಯನ್ನು ಕಿತ್ತು ಹಾಕಿದಾಗ ಮಂಗಳೂರು ಕುಲಶೇಖರದಿಂದ ಕಾರ್ಕಳದ ಬೈಪಾಸ್ ವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದಾರ್ಜೆಗೇರಿಸಿದ ಯೋಜನೆಯು ಅನುಷ್ಠಾನಗೊಳಿಸಿದ ಸಂದರ್ಭದಲ್ಲಿ ಸಾಣೂರು ಪರಿಸರದಲ್ಲಿ ಕೆಲ ಖಾಸಗಿ ಸೊತ್ತುಗಳನ್ನು ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನ ಪಡಿಸಲಾಗಿತ್ತು. ಅದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸಂಪರ್ಕ ಕೊಂಡಿಯನ್ನು ಹೆದ್ದಾರಿ ಪ್ರಾಥಿಕಾರವು ನುಂಗಿ ಹಾಕಿತು. ಪದ್ಮನಾಭ ನಗರ-ಮುದ್ದಣ ನಗರದ ಕಾಂಕ್ರೀಟ್ಕರಣ ರಸ್ತೆಯೂ ಇದರಲ್ಲಿ ಒಳಗೊಂಡಿದ್ದು, ಸುಮಾರು ೨೦ ಮೀಟರ್ ಕಾಂಕ್ರೀಟ್ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಪರಿಣಾಮವಾಗಿ ಮಣ್ಣಿನ ರಸ್ತೆಯಲ್ಲಿ ಈ ಭಾಗದ ಜನರು ಹಾದು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಮಳೆಗಾಲಕ್ಕೆ ತಿಂಗಳು ಬಾಕಿ ಉಳಿದಿದೆ. ಪದ್ಮನಾಭ ನಗರ-ಮುದ್ದಣ್ಣ ನಗರವನ್ನು ಸಂಪರ್ಕಿಸುವ ರಸ್ತೆಯ ಕೊಂಡಿ ಭಾಗದಲ್ಲಿ ಮರು ಕಾಂಕ್ರೀಟ್ಕರಣ ಮಾಡದೇ ಹಾಗೆ ಬಿಡಲಾಗಿದ್ದು, ಇರುವುದರಿಂದ ರಸ್ತೆ ಪೂರ್ತಿ ಮಳೆನೀರಿನಿಂದ ಕೆಸರುಮಯವಾಗಲಿದೆ. ದ್ವಿಚಕ್ರ, ತ್ರಿಚಕ್ರ ವಾಹನಗಳ ಓಡಾಟಕ್ಕೂ ತೊಡಕಾಗಲಿದೆ. ಪರಿಸರದ ವಿದ್ಯಾರ್ಥಿಗಳು ಇದೇ ರಸ್ತೆಯಾಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದು, ನಾನಾ ಸಂಕಷ್ಟ ಎದುರಿಸಬೇಕಾದ ಆತಂಕದಲ್ಲಿ ನಾಗರಿಕರು ಇದ್ದಾರೆ.
೧೨ ಕಡೆಗಳಲ್ಲಿ ಇಂತಹದೇ ಸಮಸ್ಸೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ನೆಪದಲ್ಲಿ ೧೨ ಕಡೆಗಳಲ್ಲಿ ಇಂತಹದೇ ಸಮಸ್ಸೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಿದ ಸಂದರ್ಭದಲ್ಲಿ ಗ್ರಾಮೀಣ ಭಾಗದ ರಸ್ತೆಯ ಕೊಂಡಿಗಳು ಕಳಚಿಕೊಂಡಿದೆ. ಕೆಲವೆಡೆ ರಾಷ್ಟ್ರೀಯ ಹೆದ್ದಾರಿಯೂ ಗ್ರಾಮೀಣ ರಸ್ತೆಗಿಂತ ಎತ್ತರವಾಗಿ ಹಾದು ಹೋದರೆ, ಇನ್ನು ಕೆಲವೆಡೆ ತಗ್ಗಿನಲ್ಲಿ ಹಾದು ಹೋಗಿದೆ. ಗ್ರಾಮೀಣ ರಸ್ತೆಯನ್ನು ಮರು ಜೋಡಣೆಗೆ ಮುಂದಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಥಿಕಾರವು ಶಾಸ್ತ್ರಕ್ಕೆ ಎಂಬಂತೆ ಮಣ್ಣು ಸುರಿದು ಬೇಕಾಬಿಟ್ಟಿಯಾಗಿ ಸಂಪರ್ಕ ಕಲ್ಪಿಸಿದೆ. ಗ್ರಾಮೀಣ ಭಾಗದ ರಸ್ತೆಯ ಮೂಲಕ ಹಾದು ಹೋಗಬೇಕಾದ ವಾಹನ ಚಾಲಕರು ಅತೀ ಸೂಕ್ಷವಾಗಿ ವಾಹನವನ್ನು ಚಲಾಯಿಸಲೇ ಬೇಕು. ಆಯಾ ತಪ್ಪಿದರೆ ಹೆದ್ದಾರಿಯ ಪಕ್ಕದ ಚರಂಡಿಗೆ ಪಲ್ಟಿ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಪ್ರದೇಶದಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಅನುವು ಆಗುವ ರೀತಿಯಲ್ಲಿ ಸಂಪರ್ಕ ರಸ್ತೆಯ ನಿರ್ಮಾಣ ಅಗತ್ಯವೂ ಇದೇ.
೧೨ ಭಾಗಗಳು… ಸಾಣೂರು ಗ್ರಾಮ ಪಂಚಾಯತ್ ರಸ್ತೆ. ರ್ನಡ್ಕ ರಸ್ತೆ, ಕೆಂಚಬೆಟ್ಟು ರಸ್ತೆ, ಫಾರ್ಮ್ ರಸ್ತೆ, ಚಿಕ್ಕಬೆಟ್ಟು ರಸ್ತೆ, ಇರ್ವತ್ತೂರು ರಸ್ತೆ, ಮುರತ್ತಂಗಡಿ ಪ.ಜಾ ಕಾಲನಿ ರಸ್ತೆ, ಸೊಸೈಟಿ -ಮುದ್ದಣ್ಣನಗರದ ರಸ್ತೆ, ಬೀಜೋತ್ಪಾದನೆ-ಮುದ್ದಣ್ಣ ನಗರ ರಸ್ತೆ, ಅನಂತನಗರ, ಬೈಪಾಸ್ ಇಂದಿರಾನಗರ ಕೂಡು ರಸ್ತೆಗಳು ಇದರಲ್ಲಿ ಒಳಗೊಂಡಿದೆ.
ಮೂಲಸೌಕರ್ಯ ಪಡೆಯುವುದು ಇವರ ಹಕ್ಕು ಭಾರತೀಯ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನು ಮೂಲ ಸೌಕರ್ಯ ಪಡೆಯುವುದು ಅವರವರ ಹಕ್ಕು ಆಗಿರುತ್ತದೆ. ಈ ನಿಟ್ಟಿನಲ್ಲಿ ಸಾಣೂರು ಗ್ರಾಮವು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಗ್ರಾಸವಾಗುತ್ತಿದೆ. ಯಾವುದೇ ಪಕ್ಷದ ಜನಪ್ರತಿನಿಧಿಗಳಿರಲಿ, ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ಅದರ ಗೌಜಿಗೆ ಇಲ್ಲಿನ ನಾಗರಿಕರು ಮುಂದಾಗುತ್ತಿಲ್ಲ. ದೇಶ ಅಭಿವೃದ್ಧಿಹೊಂದಬೇಕಾದರೆ ಗ್ರಾಮ ಅಭಿವೃದ್ಧಿಹೊಂದಲೇ ಬೇಕು. ಇದಕ್ಕೆ ಪೂರಕ ವೆಂಬಂತೆ ತಮ್ಮ ಮೂಲ ಸೌಕರ್ಯಗಳಿಗಾಗಿ ಒಂದಲ್ಲ ಒಂದು ರೀತಿಯಲ್ಲಿ ನಾಗರಿಕರು ಪಕ್ಷ-ಭೇದ ಮರೆತು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅದಕ್ಕೆ ಜಿಲ್ಲಾಡಳಿತವು ಮನ್ನಣೆ ನೀಡಿದೆ ಎಂದರೂ ತಪ್ಪಾಗಲಾರದು. ಇತರ ಗ್ರಾಮಗಳನ್ನು ತುಲನೆ ಮಾಡಿದಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗಾಗಿ ಹೋರಾಟ ನಡೆಸುತ್ತಾ ಬಂದವರ ಸಾಲಿನಲ್ಲಿ ಸಾಣೂರು ಗ್ರಾಮಸ್ಥರು ಎಂಬುವುದು ಗಮನಾರ್ಹ. ಸಾಣೂರು ಗ್ರಾಮಸ್ಥರು ನ್ಯಾಯಪರ ಹೋರಾಟದಿಂದಲೇ ಹಲವು ಸಮಸ್ಸೆಗಳಿಗೆ ಪರಿಹಾರ ದೊರೆತ್ತಿದೆ.
ಕೂಡಲೇ ಸ್ಪಂದಿಸುವಂತೆ ರಾ.ಹೆದ್ದಾರಿ ಪ್ರಾಥಿಕಾರಕ್ಕೆ ಸೂಚನೆ
ಯುವರಾಜ್ ಜೈನ್, ಅಧ್ಯಕ್ಷರು, ಸಾಣೂರು ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿ-೧೬೯ರ ಅಭಿವೃದ್ಧಿಗೆ ಸಾಣೂರು ಗ್ರಾಮ ಪಂಚಾಯತ್ ಸಕರಾತ್ಮವಾಗಿ ಸ್ಪಂದಿಸುತ್ತಾ ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಗ್ರಾಮೀಣ ಭಾಗದ ೧೨ ಕಡೆಗಳಲ್ಲಿ ಸಂಪರ್ಕ ಕೊಂಡಿಯನ್ನು ಕಳಚಿಕೊಂಡಿದ್ದು, ಅದರ ಮರುನಿರ್ಮಾಣದ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಥಿಕಾರದದಾಗಿದೆ. ಗ್ರಾಮಸ್ಥರ ಬೇಡಿಕೆತನ್ನು ನಿರ್ಲಕ್ಷಿಸುವುದು ತರವಲ್ಲ. ಬೇಡಿಕೆಗೆ ಬೆಲೆ ಸಿಗದೇ ಹೋದರೆ ಹೋರಾಟಕ್ಕೆ ಗ್ರಾಮಸ್ಥರ ಪರವಾಗಿ ಪೂರ್ಣ ರೀತಿಯಲ್ಲಿ ಬೆಂಬಲಿಸುತ್ತೇನೆ.