- ಶಿಳ್ಳೆಕ್ಯಾತ ಅಲೆಮಾರಿ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳ ಸಹಿತ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ, ಕುಂದಾಪುರದ ಹಾಲಾಡಿ, ಬ್ರಹ್ಮಾವರ, ಮಲ್ಪೆ, ಕಟ್ ಬೆಳ್ತೂರು, ಕಟಪಾಡಿ, ಪಾಂಗಾಳ ಭಾಗದ ನದಿ ತೀರಗಳಲ್ಲಿ ಅಲೆಮಾರಿ ಬುಡಕಟ್ಟು ಸಮುದಾಯವೆಂದು ಘೋಷಿಸಲಾಗಿರುವ ಶಿಳ್ಳೆಕ್ಯಾತ ಸಮುದಾಯದ ಸುಮಾರು 25 ಕುಟುಂಬಗಳು ತೆಪ್ಪಗಳ ಮೂಲಕ ನದಿಯಲ್ಲಿ ಬಲೆ ಬೀಸಿ ಮೀನು ಹಿಡಿದು ಮಾರಾಟ ಮಾಡುವ ಕಷ್ಟದಾಯಕ ಮತ್ತು ಅಪಾಯಕಾರಿ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪ್ರಸ್ತುತ ಇವರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಗುಡಿಸಲುಗಳಲ್ಲಿ ವಾಸಿಸುತ್ತಿರುವುದು ಮಾತ್ರವಲ್ಲದೆ ಸ್ಥಳೀಯರಿಂದ ಶೋಷಣೆಗೂ ಒಳಗಾಗುತ್ತಿದ್ದಾರೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಕ್ಕೆ ಸೇರಿರುವ ಶಿಳ್ಳೆಕ್ಯಾತ ಅಲೆಮಾರಿ ಕುಟುಂಬಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವಂತೆ ಜಿಲ್ಲಾಡಳಿತವು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಗೌರವಾಧ್ಯಕ್ಷರಾದ ಸಂತೋಷ್ ಬಜಾಲ್, ಶಂಕರ, ರಾಮ, ವೆಂಕಟೇಶ, ಲೋಕೇಶ, ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.
- ಬೇಡಿಕೆಗಳು:
- ೧. ಜಿಲ್ಲಾಡಳಿತವು ವಿವಿಧೆಡೆಗಳಲ್ಲಿ ಟೆಂಟ್ ಗಳಲ್ಲಿ ವಾಸಿಸುತ್ತಿರುವ ಶಿಳ್ಳೆಕ್ಯಾತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನಲೆಯ ಸರ್ವೆ ನಡೆಸುವುದು.
- ೨. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಆರೋಗ್ಯ ಕಾರ್ಡು, ಮತ್ತು ಇತರೆ ಗುರುತಿನ ಕಾರ್ಡುಗಳನ್ನು ವಿತರಿಸುವುದು.
- ೩. ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ಉಚಿತ ಮನೆ ನಿವೇಶನ ಒದಗಿಸುವುದು.
- ೪. ಪ್ರಸ್ತುವ ವಾಸಿಸುತ್ತಿರುವ ಟೆಂಟ್ ಗಳಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ದಾರಿ, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆ ಮಾಡುವುದು.
- ೫. ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿ ರಾಜ್ಯದ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಅಭಿವೃದ್ಧಿ ನಗಮದಂತಹ ವಿಶೇಷ ಕೋಶದ ಸೌಲಭ್ಯಗಳನ್ನು ಈ ಟೆಂಟ್ ಪ್ರದೇಶಗಳಿಗೆ ಅಳವಡಿಸುವುದು.
- ೬. ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಮೀನುಗಾರಿಕಾ ವೃತ್ತಿಯಲ್ಲಿ ನಿರತರಾಗಿರುವಾಗ ನಡೆಯುವ ದೌರ್ಜನ್ಯ ಘಟನೆಗಳನ್ನು ಸಂಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದು.
- ೭. ಶಿಳ್ಳೆಕ್ಯಾತ ಕುಟುಂಬಗಳು ಹೊಂದಿರುವ ಪಡಿತರ ಚೀಟಿಗಳಿಗೆ ಕೂಡಲೇ ಆಹಾರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಸತಾಯಿಸದೆ ನೀಡುವಂತೆ ನಿರ್ದೇಶನ ನೀಡುವುದು.
- ೮. ಶಿಳ್ಳೆಕ್ಯಾತ ಸಮುದಾಯದ ಮನೆ ಮಂದಿ ಡೆಂಗ್ಯೂ ಮಲೇರಿಯದಂತಹ ರೋಗಗಳಿಂದ ತಪ್ಪಿಸಲು ಪ್ರತೀ ಟೆಂಟ್ ಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸುವುದು.
- ೯. ಮಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಪ್ರತೀ ಕುಟುಂಬಗಳಿಗೂ 500 gsm ಟರ್ಪಾಲ್ ಗಳನ್ನು ಒದಗಿಸಿಕೊಡುವುದು.






































