ಮೂಡುಬಿದಿರೆ: ವಿದ್ಯಾರ್ಥಿಗಳ ವಿರುದ್ಧ ನೈತಿಕ ಪೊಲೀಸ್ಗಿರಿ : ಕಾಂಗ್ರೆಸ್,ಸಂಘ ಪರಿವಾರ ಮುಖಂಡರ ವಿರುದ್ಧ ಕೇಸು
RB NEWS
Bureau Report
ಮೂಡುಬಿದಿರೆ: ವಿದ್ಯಾರ್ಥಿಗಳ ವಿರುದ್ಧ ನೈತಿಕ ಪೊಲೀಸ್ಗಿರಿ: ಕಾಂಗ್ರೆಸ್ಮು, ಸಂಘ ಪರಿವಾರ ಮುಖಂಡ ವಿರುದ್ಧ ಕೇಸು
ಮೂಡುಬಿದಿರೆ: ನಗರದ ಕೆಫೆಯೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ನೈತಿಕ ಪೊಲೀಸ್ಗಿರಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್,ಸಂಘ ಪರಿವಾರ ಮುಖಂಡರು ಸೇರಿದಂತೆ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಪರ ಸಾಮಾಜಿಕ ಮಾಧ್ಯಮ ನಿರ್ವಹಿಸುತ್ತಿರುವ ರಿತಿಲ್ ಪೂಜಾರಿ, ಸಂಘ ಪರಿವಾರದ ಕಾರ್ಯಕರ್ತ ಪ್ರೇಮ್ ಭಂಡಾರಿ ಹಾಗೂ ಬಜರಂಗದಳದ ಮಾಜಿ ಸಂಚಾಲಕ ಸಂಜಯ್ ಹೆಗ್ಡೆ ಪ್ರಕರಣದ ಆರೋಪಿಗಳಾಗಿದ್ದಾರೆ. ಮೂಡುಬಿದಿರೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಸಮೀಪದ ಕೆಫೆಯೊಂದಕ್ಕೆ ಉಪಾಹಾರ ಸೇವಿಸಲು ತೆರಳಿದ್ದರು. ವಿದ್ಯಾರ್ಥಿಗಳು ವಿವಿಧ ಸಮುದಾಯಗಳಿಗೆ ಸೇರಿದವರು ಎನ್ನಲಾಗಿದ್ದು, ಈ ವೇಳೆ ಆರೋಪಿಗಳು ಕೆಫೆಗೆ ಪ್ರವೇಶಿಸಿ ವಿದ್ಯಾರ್ಥಿಗಳ ಹೆಸರುಗಳನ್ನು ವಿಚಾರಿಸಿ, ನಿಂದಿಸಿ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಭಯಭೀತರಾದ ವಿದ್ಯಾರ್ಥಿಗಳು ಹೆಚ್ಚಿನ ತೊಂದರೆಯಾಗಬಹುದೆಂಬ ಆತಂಕದಿಂದ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್ಐ ಪ್ರತಿಭಾ ಅವರು ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 126(2), 352, 351(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಗಳು ತನಿಖೆಯ ಹಂತದಲ್ಲಿದ್ದು, ಆರೋಪಿಗಳ ಮೇಲಿನ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.