ಮೂಡುಬಿದಿರೆ: ಯಕ್ಷಸಂಭ್ರಮ 2024 ಉದ್ಘಾಟನೆ
ರಂಗಭೂಮಿಯನ್ನು ಪೋಷಿಸುವ, ಬೆಳೆಸುವ ಕಾರ್ಯ ಪ್ರಶಂಸನೀಯ – ಪ್ರಭಾಕರ ಜೋಷಿ
ಮೂಡುಬಿದಿರೆ: ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ (ರಿ.) ಬೆಳುವಾಯಿ ಇದರ ವತಿಯಿಂದ 27ನೇ ವರ್ಷದ ಯಕ್ಷಸಂಭ್ರಮ 2024 ಕಾರ್ಯಕ್ರಮವು ಜು. 27ರಂದು ಮೂಡುಬಿದಿರೆ ಕಡಲಕೆರೆಯ ಪ್ರೀತಮ್ ಗಾರ್ಡನ್ ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಯಕ್ಷಗಾನ ಕಲಾವಿದ ವಿಧ್ವಾಂಸ ಎಂ. ಪ್ರಭಾಕರ ಜೋಶಿಯವರು ಮಾತನಾಡಿ ಹಲವಾರು ಯಕ್ಷಗಾನ ಕಾರ್ಯಕ್ರಮಗಳನ್ನು ನಡೆಸುವ ಜೊತೆಗೆ ದಾಖಲೀಕರಣ ಕಾರ್ಯವೂ ದೇವಾನಂದ ಭಟ್ ಅವರಿಂದ ನಡೆಯುತ್ತಿದ್ದು, ತಳಮಟ್ಟದಲ್ಲಿ ಮಕ್ಕಳಿಗೆ ಮತ್ತು ಹಿರಿಯರಿಗಾಗಿ ನಿರಂತರ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಯಕ್ಷಕಲಾ ರಂಗಭೂಮಿಯನ್ನು ಪೋಷಿಸುವ, ಬೆಳೆಸುವ ಕಾರ್ಯವನ್ನು ಅವರು ಮಾಡುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್ ಅವರು ಮಾತನಾಡಿ ದೇಶ ವಿದೇಶಗಳಲ್ಲಿ ಯಕ್ಷಗಾನವನ್ನು ಪಸರಿಸುವಲ್ಲಿ ದೇವಾನಂದ ಭಟ್ ಅವರ ಕೊಡುಗೆ ಅನನ್ಯವಾಗಿದ್ದು ಅವರು ಹಮ್ಮಿಕೊಳ್ಳುವ ಯಕ್ಷಗಾನ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ಆಶೀರ್ವಚನ ನುಡಿದ ಸಂಪಿಗೆಯ ಡಾ. ಯೋಗಿ ಸುಧಾಕರ ತಂತ್ರಿಯವರು ಮಾತನಾಡಿ ಜನಮೆಚ್ಚದೆ ಯಕ್ಷಗಾನದಂತಹ ಕಲೆ ಬೆಳೆಯಲು ಸಾಧ್ಯವಿಲ್ಲ . ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇವಾನಂದ ಭಟ್ ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ಕೊಡುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಪದ್ಮಾರಬೆಟ್ಟದ ಅನುವಂಶೀಯ ಆಡಳಿತಗಾರ ಎ. ಜೀವಂಧರ ಕುಮಾರ್, ಜಯಶ್ರೀ ಅಮರನಾಥ ಶೆಟ್ಟಿ, ಪವರ್ ಪಾಯಿಂಟ್ ಬ್ಯಾಟರಿಯ ಮಹೇಂದ್ರವರ್ಮ ಜೈನ್, ಜವನರ್ ಬೆದ್ರ ಸಂಘಟನೆಯ ಸ್ಥಾಪಕ ಅಧ್ಯಕ್ಷ ಅಮರ್ ಕೋಟೆ, ಪಡುಬಿದ್ರೆ ಸುಬ್ರಹ್ಮಣ್ಯ ಶಾನುಭೋಗರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ದೇವಾನಂದ ಭಟ್ ಸ್ವಾಗತಿಸಿದರು. ಶುಭಾಂಜನಾ ಡಿ. ಭಟ್ ಪ್ರಾರ್ಥಿಸಿದರು. ಶೃತಕೀರ್ತಿರಾಜ ನಿರೂಪಿಸಿದರು. ರವಿಪ್ರಸಾದ್ ಕೆ. ಶೆಟ್ಟಿ ವಂದಿಸಿದರು.































