ಮೂಡುಬಿದಿರೆ: ಮುಖ್ಯ ರಸ್ತೆಯ ಬದಿಯಲ್ಲಿ ಅನಾಥ ಟೆಂಪೋ ರಿಕ್ಷಾ
ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಜನರ ಅಶೋತ್ತರಕ್ಕೆ ಸ್ಪಂದಿಸಿದ ಶಾಸಕರು ಬಹಳ ಸುಂದರವಾದ ತಾಲೂಕು ಕಚೇರಿಯನ್ನು ಮೂಡುಬಿದಿರೆಗೆ ಒದಗಿಸಿದರು. ಹಿಂದಿನ ತಾಲೂಕು ಕಚೇರಿಯ ಮಗ್ಗುಲಲ್ಲಿ ಇದ್ದ ಅವರ ಶಾಸಕರ ಕಚೇರಿಯು ಪ್ರಸ್ತುತ ನೂತನ ತಾಲೂಕು ಕಚೇರಿಗೆ ಸ್ಥಳಾಂತರಿಸಲ್ಪಟ್ಟಿದೆ. ಹಿಂದಿನ ಶಾಸಕರ ಕಚೇರಿಯ ಬದಿಯಲ್ಲಿ ನಂದಿನಿ ಬೂತ್ ಕಾರ್ಯಾಚರಿಸುತ್ತಿದೆ. ನಂದಿನಿ ಬೂತ್ ನ ಎದುರುಗಡೆ ಇರುವ ಐದಾರು ಮರಗಳ ಅಡಿಯಲ್ಲಿ ಸಾಕಷ್ಟು ವಾಹನಗಳು ತಂಪನ್ನು ಅರಸಿ ನಿಂತಿರುತ್ತವೆ. ಈ ವಾಹನಗಳಿಂದ ಯಾರಿಗೂ ಯಾವುದೇ ರೀತಿಯ ತೊಂದರೆಗಳು ಇರುವುದಿಲ್ಲ.
ಆದರೆ ಕಳೆದ ನಾಲ್ಕಾರು ತಿಂಗಳುಗಳಿಂದ ಟೆಂಪೋ ರಿಕ್ಷಾ ಒಂದು ಮುಖ್ಯ ರಸ್ತೆಯ ಬದಿಯಲ್ಲಿ ಅನಾಥವಾಗಿ ನಿಂತಿದೆ.
ಪ್ರತಿನಿತ್ಯ ಎಂಬಂತೆ ಪೊಲೀಸರ ವಾಹನ ಇದೇ ಮಾರ್ಗದಲ್ಲಿ ಸುಮಾರು ಹತ್ತಾರು ಬಾರಿ ರೌಂಡ್ ಹೊಡೆದರೂ ಕೂಡ ಈ ಅನಾಥವಾದ ರಿಕ್ಷಾ ಅವರ ಕಣ್ಣಿಗೆ ಬೀಳದೆ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ. ಸಾಮಾನ್ಯವಾಗಿ ಸುಗಮ ಸಂಚಾರಕ್ಕೆ ತೊಂದರೆ ಕೊಡುವ ರೀತಿಯಲ್ಲಿ ಮುಖ್ಯರಸ್ತೆಯ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದೆಂಬ ನಿಯಮ ಇದೆ.
ಇಷ್ಟಿದ್ದೂ ಮಾರುಕಟ್ಟೆಯ ಬಸ್ ಸ್ಟ್ಯಾಂಡ್ ನ ಎದುರುಗಡೆ ಯಲ್ಲಿಯೇ ಈ ಅನಾಥ ರಿಕ್ಷಾ ಮುಖ್ಯರಸ್ತೆಯ ಬದಿಯಲ್ಲಿ ನಿಂತಿದೆ. ಕಳೆದ ಎರಡು ದಿನಗಳಿಂದ ಈ ಗತಿ ದಾತಾರರಿಲ್ಲದ ರಿಕ್ಷಾದ ಬಗ್ಗೆ ಪೊಲೀಸರಿಗೆ ತಿಳಿಸಿದರು ಅದನ್ನು ಅಲ್ಲಿಂದ ನಿವಾರಿಸದೆ ಇರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ.































