ಮೂಡುಬಿದಿರೆ: ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳ – ಕರಾವಳಿಯ ಅನನ್ಯ ಆಕರ್ಷಣೆ
RB NEWS
Bureau Report
ಮೂಡುಬಿದಿರೆ: ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳ – ಕರಾವಳಿಯ ಅನನ್ಯ ಆಕರ್ಷಣೆ
ಮೂಡುಬಿದಿರೆಯ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಅದರದ್ದೇ ಆದ ವಿಶಿಷ್ಟ ಆಕರ್ಷಣೆಯಿದೆ. ಕರಾವಳಿ ಜಿಲ್ಲೆಗಳಲ್ಲಿನ ಕಾರ್ಕಳದ ಮೀಯರಿನ ಲವ–ಕುಶ ಕಂಬಳ ಹಾಗೂ ಮೂಡುಬಿದಿರೆಯ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳಕ್ಕೆ ಇರುವ ಜನಾಕರ್ಷಣೆ ಇತರೆ ಯಾವುದೇ ಕಂಬಳಕ್ಕೂ ಇಲ್ಲವೆಂಬುದು ಕಂಬಳಾಸಕ್ತರ ಅಭಿಪ್ರಾಯವಾಗಿದೆ. ಮೂಡುಬಿದಿರೆಯ ಕೋಟಿ–ಚೆನ್ನಯ್ಯ ಕಂಬಳದ ಪ್ರಧಾನ ರೂವಾರಿಯಾಗಿರುವವರು ಕೆ. ಗುಣಪಾಲ ಕಡಂಬ. ಇದಕ್ಕೂ ಮುನ್ನ ನಾರಂಪಾಡಿಯ ಕಂಬಳ ಗದ್ದೆಯಲ್ಲಿ ಜಯ–ವಿಜಯ ಕಂಬಳ ನಡೆಯುತ್ತಿದ್ದು, ಕಾಲಕ್ರಮೇಣ ಅದು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲೂ ಸಾರ್ವಜನಿಕ ಸಮಿತಿಯ ಕಂಬಳ ಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಪ್ರಭಾವಿ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಕಾರ್ಯೋನ್ಮುಖರಾದವರು ಗುಣಪಾಲ ಕಡಂಬರು. ಕಡಲಕೆರೆ ನಿಸರ್ಗಧಾಮದ ಸಮೀಪ ಕಂಬಳ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಅಗತ್ಯ ದಾಖಲೆ ಪತ್ರಗಳ ತಯಾರಿಯಲ್ಲಿ ಕಡಂಬರು ಅಪಾರ ಶ್ರಮವಹಿಸಿದರು. ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಾಗವಾಗಿದ್ದರಿಂದ ಅರಣ್ಯ ಬೆಳೆಸುವ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಯೋಜನೆಗಳನ್ನೂ ಮುಂದಿಟ್ಟರೂ, ಸ್ಥಳೀಯ ಅರಣ್ಯ ಅಧಿಕಾರಿಗಳ ವಿಳಂಬ ಹಾಗೂ ಕಿರುಕುಳ ಕಂಬಳ ನಿರ್ಮಾಣಕ್ಕೆ ಅಡ್ಡಿಯಾಗುತ್ತಿತ್ತು.
ಆ ಸಂದರ್ಭದಲ್ಲಿ ಸರಕಾರದ ಅರಣ್ಯ ಖಾತೆಯ ಮುಖ್ಯ ಕಾರ್ಯದರ್ಶಿಯಾಗಿದ್ದ ಸತ್ಯಮೂರ್ತಿಯವರು ಮೂಡುಬಿದಿರೆಯ ಜೈನ್ ಜ್ಯೂನಿಯರ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ಸಹಕಾರಿಯಾಗಿ ಪರಿಣಮಿಸಿತು. ಕೆಎಎಸ್ ತೇರ್ಗಡೆಗೊಂಡು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸತ್ಯಮೂರ್ತಿಯವರ ಬೆಂಬಲದಿಂದ ಕಂಬಳ ನಿರ್ಮಾಣಕ್ಕೆ ಬೇಕಾದ ಅನುಮತಿಗಳು ಲಭಿಸಿ, ಕಡಂಬರ ಪರಿಶ್ರಮಕ್ಕೆ ಜಯ ದೊರೆಯಿತು. ಮೂಡುಬಿದಿರೆಯ ಕೋಟಿ–ಚೆನ್ನಯ್ಯ ಕಂಬಳ ನಿರ್ಮಾಣದಲ್ಲಿ ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ ಹಾಗೂ ಕೆ. ಅಭಯಚಂದ್ರ ಜೈನ್ ಅವರ ಪಾತ್ರವೂ ಅತ್ಯಂತ ಪ್ರಮುಖವಾಗಿತ್ತು. ಆ ಸಮಯದ ಶಾಸಕ ಕೆ. ಅಭಯಚಂದ್ರ ಜೈನ್ ಅವರ ಉಸ್ತುವಾರಿಯಲ್ಲೇ ಕಂಬಳ ನಡೆದುಬಂದಿದ್ದು, ನಂತರ ಉಮಾನಾಥ ಕೋಟ್ಯಾನ್ ಶಾಸಕನಾಗಿ ಆಯ್ಕೆಯಾದ ಬಳಿಕ ಉಸ್ತುವಾರಿಯಲ್ಲಿ ಬದಲಾವಣೆ ಕಂಡುಬಂತು. ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡಾ ಕಂಬಳ ಕರೆಯ ಅಭಿವೃದ್ಧಿ, ಮಂಜೊಟ್ಟಿ ಎದುರಿನ ಸಭಾವೇದಿಕೆ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಮಂಗಳೂರಿನ ಎಂ.ಸಿ.ಎಫ್. ಸಂಸ್ಥೆಯ ದೇಣಿಗೆಯ ಮೂಲಕ ನಿರ್ಮಿಸಲಾದ ಸಭಾವೇದಿಕೆ ಸಾಂಪ್ರದಾಯಿಕ ಮನೆತನದ ದೊಡ್ಡ ಚಾವಡಿಯ ಮಾದರಿಯಲ್ಲಿ ರೂಪುಗೊಂಡಿದ್ದು, ವಿಶೇಷ ಗಮನ ಸೆಳೆಯುತ್ತದೆ. ಜೋಡುಕರೆಯ ರಚನೆಯಲ್ಲಿ ಅಗತ್ಯ ಬದಲಾವಣೆಗಳ ಬೇಡಿಕೆಯನ್ನು ಕೂಡಾ ಅವರು ಪೂರೈಸಿದ್ದಾರೆ. ಈ ಕಂಬಳದ ಇನ್ನೊಂದು ವಿಶೇಷತೆ ಎಂದರೆ ಬೆಳಗಿನ ಉಪಾಹಾರದಿಂದ ಹಿಡಿದು ಮಧ್ಯಾಹ್ನ ಹಾಗೂ ರಾತ್ರಿಯ ಊಟದವರೆಗೆ ಇರುವ ವ್ಯವಸ್ಥೆ. ಕೇವಲ ಚಹಾ–ಅವಲಕ್ಕಿ ಸಜ್ಜಿಗೆಗೆ ಸೀಮಿತವಾಗದೆ, ಅಚ್ಚುಕಟ್ಟಾಗಿ ತಯಾರಿಸಲಾದ ಆಹಾರವನ್ನು ವಿಐಪಿ ಸೇರಿದಂತೆ ಎಲ್ಲರಿಗೂ ಸಮಾನವಾಗಿ ನೀಡಲಾಗುತ್ತಿದೆ. ಓಟಗಾರರು, ಪ್ರೇಕ್ಷಕರು ಸೇರಿದಂತೆ ಎಲ್ಲರಿಗೂ ಗಂಜಿ ಊಟದ ವ್ಯವಸ್ಥೆಯಿರುವುದು ಬಹುಶಃ ಮೂಡುಬಿದಿರೆಯ ಕಂಬಳದಲ್ಲೇ ಮಾತ್ರ ಕಂಡುಬರುವ ವಿಶೇಷತೆ ಎನ್ನಬಹುದು. ಶಾಸಕರ ಜವಾಬ್ದಾರಿಗಳನ್ನು ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರದ್ಧೆ ಮತ್ತು ನಿಷ್ಠೆಯಿಂದ ನಿರ್ವಹಿಸುತ್ತಿರುವುದೇ ಈ ಕಂಬಳದ ಖ್ಯಾತಿ ಮತ್ತು ಯಶಸ್ಸಿನ ಗುಟ್ಟು ಎಂದು ಹೇಳಲಾಗುತ್ತಿದೆ. ಮೂಡುಬಿದಿರೆ ಪೇಟೆಯಿಂದ ಬೈಪಾಸ್ ರಿಂಗ್ ರೋಡಿನತ್ತ ತೆರಳುವಾಗ ಹಾಗೂ ಕಾರ್ಕಳ ರಸ್ತೆಯ ಆಲಂಗಾರು ಬಸ್ ನಿಲ್ದಾಣದಿಂದ ಬೆಳ್ಮಣ್ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ. ಮುಂದುವರಿದಾಗ ಎಡಭಾಗದಲ್ಲಿ ಕಂಬಳ ಸ್ಥಳ ಕಾಣಿಸುತ್ತದೆ. ಈ ಪ್ರದೇಶಕ್ಕೆ ‘ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ’ ಎಂದು ನಾಮಕರಣ ಮಾಡಲಾಗಿದೆ. ಹಾಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕಂಬಳ ಸಮಿತಿಯ ಗೌರವ ಅಧ್ಯಕ್ಷರಾಗಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷರಾಗಿದ್ದಾರೆ. ಕೆ. ಗುಣಪಾಲ ಕಡಂಬ ಪ್ರಧಾನ ಕಾರ್ಯದರ್ಶಿಯಾಗಿದ್ದು, ಭಾಸ್ಕರ ಕೋಟ್ಯಾನ್ ಇರ್ವತ್ತೂರು ಕೋಶಾಧಿಕಾರಿಯಾಗಿದ್ದಾರೆ. ಈ ವರ್ಷ ನಡೆಯಲಿರುವ 23ನೇ ವರ್ಷದ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳವು 31-01-2026ರ ಶನಿವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ.