ಮುನಿಶ್ರೀಗಳ ಮಂಗಳಪುರ ಪ್ರವೇಶ, ಚಾತುರ್ಮಾಸಕ್ಕೆ ಭಕ್ತರಿಗೆ ಪ್ರೇರಣೆ
RB NEWS
Bureau Report
ಮುನಿಶ್ರೀಗಳ ಮಂಗಳಪುರ ಪ್ರವೇಶ, ಚಾತುರ್ಮಾಸಕ್ಕೆ ಭಕ್ತರಿಗೆ ಪ್ರೇರಣೆ
ಕಾರ್ಕಳ: ತಮ್ಮ ಹದಿನಾರನೇ ಚಾತುರ್ಮಾಸ ವ್ರತಾಚರಣೆಯ ಅಂಗವಾಗಿ ಮಂಗಳಪುರ ಪ್ರವೇಶಿಸಿದ ಪರಮಪೂಜ್ಯ ಏಲಾಚಾರ್ಯ ಮುನಿಶ್ರೀ ೧೦೮ ಪ್ರಸಂಗ ಸಾಗರ ಮಹಾರಾಜರು, ಕಾರ್ಕಳದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಮುಂದಿನ ವರ್ಷ ನಡೆಯಲಿರುವ ಶ್ರೀ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ಚಾತುರ್ಮಾಸ ವ್ರತಾಚರಣೆಯು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಆತ್ಮಶುದ್ಧಿ ಹಾಗೂ ಆತ್ಮಕಲ್ಯಾಣದತ್ತ ಪ್ರೇರೇಪಿಸುವಂತಾಗಬೇಕು ಎಂದು ಅವರು ತಿಳಿಸಿದರು. ಚಾತುರ್ಮಾಸವನ್ನು ಅತಿಯಾದ ಖರ್ಚು ಹಾಗೂ ಆಡಂಬರವಿಲ್ಲದೆ, ಸರಳತೆ ಮತ್ತು ಭಕ್ತಿಭಾವದಿಂದ ಆಚರಿಸುವಂತೆ ಅವರು ಸಲಹೆ ನೀಡಿದರು. “ನಾನು ನಿಮ್ಮಲ್ಲಿ ಹಾಲಾಗಿ ಬಂದಿದ್ದೇನೆ; ನೀವು ಸಕ್ಕರೆಯಾಗಿ ಸೇರಿ ಈ ಚಾತುರ್ಮಾಸವನ್ನು ಇನ್ನಷ್ಟು ಸಾರ್ಥಕಗೊಳಿಸಬೇಕು” ಎಂಬ ಹಿತವಚನದ ಮೂಲಕ ಭಕ್ತರಲ್ಲಿ ಉತ್ಸಾಹ ತುಂಬಿದರು. ಹಿಂದಿನ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿಯೂ ತಮಗೆ ಲಭಿಸಿದ ಪಾವನ ಸಾನ್ನಿಧ್ಯವನ್ನು ಸ್ಮರಿಸಿಕೊಂಡ ಅವರು, ಈ ಬಾರಿಯೂ ಭಕ್ತರೆಲ್ಲರೂ ಧರ್ಮಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಮಾತನಾಡಿ, ಮಹಾಮಸ್ತಕಾಭಿಷೇಕದ ಪೂರ್ವದಲ್ಲಿ ನಡೆಯುತ್ತಿರುವ ಈ ಚಾತುರ್ಮಾಸ ವ್ರತಾಚರಣೆಯು ಭಕ್ತರ ಪುಣ್ಯದ ಫಲವಾಗಿದ್ದು, ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವ ಮಹತ್ವದ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಚಾತುರ್ಮಾಸದ ಮೊದಲ ಕಾರ್ಯಕ್ರಮದಲ್ಲಿಯೇ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರ ಉತ್ಸಾಹವು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಚಾತುರ್ಮಾಸ ವ್ರತಾಚರಣೆಗೆ ₹5 ಲಕ್ಷಗಳ ದೇಣಿಗೆಯನ್ನು ಘೋಷಿಸಿದರು. ವೇದಿಕೆಯಲ್ಲಿ ಪರಮಪೂಜ್ಯ ಮುನಿಶ್ರೀ ೧೦೮ ಪ್ರಸಂಗ ಸಾಗರ ಮಹಾರಾಜರು, ಕಾರ್ಕಳ ಜೈನ ಮಠದ ಪರಮಪೂಜ್ಯ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು, ಕ್ಷುಲ್ಲಕ ಪ್ರಗುಣ ಸಾಗರ ಮಹಾರಾಜರು ಹಾಗೂ ಅವರ ಸಂಘ, ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕಾರ್ಕಳ ಪಟ್ಟದ ಪುರೋಹಿತರಾದ ವರ್ಧಮಾನ ಇಂದ್ರ ಸೇರಿದಂತೆ ವಿವಿಧ ಜೈನ ಸಂಘ–ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಗುಣಪಾಲ ಕಡಂಬ ಅವರು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.