

ಮುನಿಯಾಲು ಸಂಜೀವಿನಿ ಗೋಧಾಮ : “ಕೃಷಿ ಸಂಸ್ಕೃತಿಯ ಜ್ಞಾನದ ಪೀಠ”
– ಸುಕುಮಾರ್ ಮುನಿಯಾಲ್



ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮುನಿಯಾಲಿನ ನಿಸರ್ಗಸಿರಿ ಮಡಿಲಲ್ಲಿ ನಿರ್ಮಿತವಾದ ಸಂಜೀವಿನಿ ಗೋಧಾಮ ಇಂದು ಕೃಷಿ ಸಂಸ್ಕೃತಿ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆಯ ಅಪೂರ್ವ ಕೇಂದ್ರವಾಗಿ ಹೊರಹೊಮ್ಮಿದೆ. ಪುರಾತನ ಶೈಲಿಗೆ ಆಧುನಿಕ ಸ್ಪರ್ಶ ನೀಡಿದ ವಿನೂತನ ಯೋಜನೆಯ ಮೂಲಕ ರೂಪುಗೊಂಡ ಈ ಗೋಧಾಮ ಕೃಷಿ ಆಸಕ್ತರು, ಯುವಕರು ಹಾಗೂ ಸಂಶೋಧಕರನ್ನು ಸಮಾನವಾಗಿ ಆಕರ್ಷಿಸುತ್ತಿದೆ. ಸಮುದಾಯಕ್ಕೆ ಸಮಗ್ರ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ “ಜ್ಞಾನದ ಪೀಠ”ವಾಗಿಯೂ ಇದು ರೂಪಾಂತರಗೊಂಡಿದೆ.
ಏಕಪವಿತ್ರ ಶ್ರೀಮನ್ನಾಗಮಂಡಲ – ಪ್ರಕೃತಿಯಿಂದ ಪ್ರಕೃತಿಗೆ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21ರವರೆಗೆ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ನಡೆಯಲಿದೆ. ಪ್ರಕೃತಿ ಸಂರಕ್ಷಣೆ ಮತ್ತು ರೈತರ ಗೌರವವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಅಪೂರ್ವ ಸಂಸ್ಕೃತಿಕ–ಕೃಷಿ ಉತ್ಸವ ಇದಾಗಲಿದೆ.
ಈ ಸಂದರ್ಭದಲ್ಲಿ 240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಿಸಿದ ಅಪರೂಪದ ಕೃಷಿಕ ಋಷಿ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರಿಗೆ ಮೂಡಬಿದರೆ ಎಸ್ಕೆಎಫ್ ಸಂಸ್ಥೆ ನೀಡುವ “ರೈತಪೀಠ” ಪ್ರಥಮ ಪ್ರಶಸ್ತಿ ಪ್ರದಾನವಾಗಲಿದೆ.
ರೈತಪೀಠ – ರೈತನಿಗೆ ಗೌರವದ ಗದ್ದುಗೆ
“ರೈತನು ಕಾರ್ಪೊರೇಟ್ ಮಟ್ಟಕ್ಕೆ ಬೆಳೆಯಬೇಕು” ಎಂಬ ಮಹದಾಸೆಯಿಂದ ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕರಾದ ಡಾ. ಜಿ. ರಾಮಕೃಷ್ಣ ಆಚಾರ್ ಅವರು “ರೈತಪೀಠ” ಗೌರವವನ್ನು ಸ್ಥಾಪಿಸಿದ್ದಾರೆ. ರೈತರ ತ್ಯಾಗ, ಪರಿಶ್ರಮ ಮತ್ತು ಸಮಾಜದಲ್ಲಿನ ಅವರ ಮಹತ್ವವನ್ನು ಗುರುತಿಸುವುದು ಇದರ ಉದ್ದೇಶ.
ಪ್ರಕೃತಿಯ ರಕ್ಷಕನಾದ ನಾಗದೇವರ ಆಶೀರ್ವಾದದೊಂದಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸನಾತನ ಸಂಸ್ಕೃತಿಯ ಮೂಲಭೂತ ತತ್ವವಾದ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಾರಲಿದೆ.
ಶುದ್ಧ ಪ್ರಕೃತಿ ಆಧಾರಿತ ನಾಗಮಂಡಲ
ಶ್ರೀಮನ್ನಾಗಮಂಡಲ ಸಂಪೂರ್ಣವಾಗಿ ಪರಿಸರ ಸ್ನೇಹಿ ವಿಧಾನದಲ್ಲಿ ನಡೆಯಲಿದೆ:
ಶುದ್ಧ ಭೂಮಿ ಸೃಷ್ಟಿ : ಉಳುಮೆ, ಬೀಜ ಬಿತ್ತನೆ ಮತ್ತು ಹಸುಗಳ ಮೇಯುವಿಕೆಯಿಂದ ಭೂಮಿಯ ಪವಿತ್ರೀಕರಣ.
ರಾಸಾಯನಿಕ ರಹಿತ ಬಣ್ಣಗಳು : ಅಕ್ಕಿಪುಡಿ (ಬಿಳಿ), ಅರಿಶಿನ (ಹಳದಿ), ಸುಣ್ಣ–ಅರಿಶಿನ (ಕೆಂಪು), ಎಲೆಪುಡಿ (ಹಸಿರು), ಹೊಟ್ಟು (ಕಪ್ಪು) – ಐದು ಶುದ್ಧ ಬಣ್ಣಗಳಿಂದ ನಾಗಮಂಡಲ ರಚನೆ.
ದೊಂದಿ ದೀಪಾಲಂಕಾರ : ತೈಲದ ದೀಪಗಳಿಂದ ಮಂಟಪ ಅಲಂಕಾರ; ದೇವರಿಗೆ ನೆರಳು ಬೀಳದಂತೆ ಆರಾಧನೆ.
ಶಬ್ದಮಾಲಿನ್ಯ ರಹಿತ ಸೇವೆ : ಉಡಿಕೆ, ಶಂಖ, ತಾಳ, ನಾಗಸ್ವರಗಳಂತಹ ಮೃದು ವಾದ್ಯೋಪಕರಣಗಳು ಮಾತ್ರ.
ಮಹಾ ಅನ್ನಸಂತರ್ಪಣೆ : ಫೆ. 21ರಂದು ಮಧ್ಯಾಹ್ನ 12:30ರಿಂದ.
ಬೀಜದುಂಡೆ ಪ್ರಸಾದ : ಸುಬ್ರಹ್ಮಣ್ಯ ದೇವರ ಮೃತ್ತಿಕೆಯು ಸೇರಿದ ಮಣ್ಣಿನಿಂದ ತಯಾರಿಸಿದ 5,000 ಬೀಜದುಂಡೆಗಳ ವಿತರಣೆ.
1,000 ಹಿಂಗಾರ ಹೂವಿನ ಮಿತ ಬಳಕೆ; ಅದಕ್ಕೆ ಪ್ರತಿಯಾಗಿ 1,000 ಅಡಿಕೆ ಸಸಿಗಳ ವಿತರಣೆ – ಪ್ರಕೃತಿ ಸಂರಕ್ಷಣೆಯ ಪ್ರತಿಜ್ಞೆ.
ಸಮಗ್ರ ಕೃಷಿಯ ಪ್ರಯೋಗಶಾಲೆ
ಮುನಿಯಾಲು ಗೋಧಾಮವು ಸಮಗ್ರ ಕೃಷಿಯ ಮಾದರಿ ಕೇಂದ್ರವಾಗಿದೆ. ಕೃಷಿ, ಪಕ್ಷಿ ವೀಕ್ಷಣೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹಣ್ಣು ತೋಟಗಳು, ಕುರಿ–ಕುದುರೆ ಸಾಕಾಣಿಕೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗಳ ಮೂಲಕ ಒಬ್ಬ ರೈತ ಸಮಗ್ರವಾಗಿ ಬೆಳೆಯಬಹುದೆಂಬುದಕ್ಕೆ ಇದು ಜೀವಂತ ಸಾಕ್ಷಿಯಾಗಿದೆ. ತಂತ್ರಜ್ಞಾನ ಬಳಸಿ ಕೃಷಿಯನ್ನು ಆಧುನಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದಿಕ್ಕಿನಲ್ಲಿ ಯುವಜನರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಸಂಸ್ಕೃತಿ–ಕೃಷಿ ಸೇತುವೆ
ಇಕೋ ಸೆನ್ಸಿಟಿವ್ ವಲಯದಲ್ಲಿರುವ ಈ ಪ್ರದೇಶದಲ್ಲಿ ಕೈಗಾರಿಕಾ ಆರ್ಭಟವಿಲ್ಲದೆ, ಪ್ರಕೃತಿ–ಪರಿಸರ–ಕೃಷಿ ಸಂರಕ್ಷಣೆಯ ಸಂದೇಶ ಸಾರುವ ಕಾರ್ಯಕ್ರಮ ಇದಾಗಿದೆ. “ಹಳ್ಳಿಯ ಬದುಕು ಯಾಕೆ ಅಗತ್ಯ?” ಎಂಬ ಪ್ರಶ್ನೆಗೆ ನಾಗಮಂಡಲವೇ ಉತ್ತರವಾಗಲಿದೆ ಎಂದು ಡಾ. ರಾಮಕೃಷ್ಣ ಆಚಾರ್ ಅಭಿಪ್ರಾಯಪಟ್ಟಿದ್ದಾರೆ.
ಕೃತಿ ಬಿಡುಗಡೆ
ಗೋಧಾಮದ ಸಾಧನೆಗಳನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ರಚಿಸಿರುವ “ರೈತಪೀಠ – ಇದು ಈ ನೆಲದ ಜ್ಞಾನಪೀಠ” ಕೃತಿಯ ಬಿಡುಗಡೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.
ಗಣ್ಯರ ಅಭಿಪ್ರಾಯ
“ರೈತರ ಪರಿಶ್ರಮಕ್ಕೆ ಮನ್ನಣೆ ನೀಡುವ ಈ ಐತಿಹಾಸಿಕ ಕಾರ್ಯಕ್ರಮ ನಮ್ಮ ನೆಲಕ್ಕೆ ಗೌರವ ತಂದಿದೆ,” ಎಂದು ಶಾಸಕ ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
“ಕೈಗಾರಿಕೋಧ್ಯಮಿಯೊಬ್ಬರು ಕೃಷಿಗೆ ಆದ್ಯತೆ ನೀಡಿ ಗ್ರಾಮೀಣ ಪ್ರದೇಶದಲ್ಲಿ ಸಂಶೋಧನಾ ಕೇಂದ್ರ ನಿರ್ಮಿಸಿರುವುದು ಮಹಾನ್ ಕಾರ್ಯ,” ಎಂದು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ರೈತ ಬೆಳೆದರೆ ಮಾತ್ರ ಸಮಾಜ ಬೆಳೆಯುತ್ತದೆ. ರೈತನಿಗೆ ಗೌರವ, ಪ್ರಕೃತಿಗೆ ಸಂರಕ್ಷಣೆ ಮತ್ತು ಸಂಸ್ಕೃತಿಗೆ ಪೋಷಣೆ – ಈ ತ್ರಿವೇಣಿ ಸಂಗಮವೇ ಮುನಿಯಾಲು ಸಂಜೀವಿನಿ ಗೋಧಾಮದ ಶ್ರೀಮನ್ನಾಗಮಂಡಲದ ಮೂಲ ಉದ್ದೇಶವಾಗಿದೆ.







































