ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ: ಆಶ್ಲೇಷಾ ಬಲಿ, ಮಹಾ ಅನ್ನಸಂತರ್ಪಣೆ

Picture of RB NEWS

RB NEWS

Bureau Report


ಮುನಿಯಾಲು: ಕೃಷಿಲೋಕ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಡಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲವು ಭಕ್ತರ ಸಹಭಾಗಿತ್ವದಲ್ಲಿ ಶನಿವಾರ ವೈಭವದಿಂದ ನಡೆಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಆಶ್ಲೇಷಾ ಬಲಿದಾನ, ಪಂಚವಿಶಂತಿ ದ್ರವ್ಯಮೀಳಿತ ಕಲಶ, ಪ್ರಧಾನ ಯಾಗ, ಸರ್ಪತ್ರಯ ಮಂತ್ರಯಾಗ, ಪವಮಾನ ಸೂಕ್ತ ಯಾಗ, ತಿಲ ಯಾಗ, ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ ಹಾಗೂ ಅನ್ನಾರಾಧನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸಂಜೆ ಶ್ರೀದುರ್ಗಾ ನಮಸ್ಕಾರ ಪೂಜೆ ಭಕ್ತಿಭಾವದಿಂದ ನಡೆಯಿತು.
ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ, ವಾಸುದೇವ ಭಟ್ ಅವರ ಸಹಯೋಗದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಭವಾನಿ ಭೋಜನಾಲಯದಲ್ಲಿ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸಹಸ್ರಾರು ಮಂದಿ ಭಕ್ತರು ಅನ್ನದಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಎನ್. ಸಂತೋಷ ಹೆಗ್ಡೆ ಅವರು ಶ್ರೀಮನ್ನಾಗಮಂಡಲಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಜೊತೆಗೆ ಸುನೀಲ್ ಕುಮಾರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಯೋಗೀಶ್ ಶೆಟ್ಟಿ ಕಾಪು, ಜಗದೀಶ ಅಧಿಕಾರಿ ಸೇರಿದಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಗಣ್ಯರು ಹಾಗೂ ಭಕ್ತ ಸಮೂಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋಧರ ಶರ್ಮ ಬಾರ್ಕೂರು ಮತ್ತು ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದ ವ್ಯವಸ್ಥೆಯನ್ನು ನಿರ್ವಹಿಸಿದರು.
ಒಟ್ಟಾರೆಯಾಗಿ, ಆಧ್ಯಾತ್ಮಿಕ ಶ್ರದ್ಧೆ ಮತ್ತು ಪರಂಪರೆಯ ಸಾಂದ್ರತೆಯನ್ನು ಪ್ರತಿಬಿಂಬಿಸಿದ ಶ್ರೀಮನ್ನಾಗಮಂಡಲ ಮಹೋತ್ಸವ ಭಕ್ತರ ಭಕ್ತಿಭಾವದ ನಡುವೆ ಯಶಸ್ವಿಯಾಗಿ ನೆರವೇರಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top