ಮುನಿಯಾಲು ನಾಗಮಂಡಲ ಮಾದರಿ – ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
RB NEWS
Bureau Report
ಮುನಿಯಾಲು ಶ್ರೀಮನ್ನಾಗಮಂಡಲಕ್ಕೆ ಪ್ರಚಾರ ಕಾರ್ಯಕ್ಕೆ ಚಾಲನೆ
ಮುನಿಯಾಲು ನಾಗಮಂಡಲ ಮಾದರಿ – ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ಮುನಿಯಾಲು, ಜ.25: ಮುನಿಯಾಲು ಸಾದು–ಸಂತರ ತಪಸ್ಸಿನಿಂದ ಪಾವನಗೊಂಡ ಸ್ಥಳವಾಗಿದ್ದು, ಇಲ್ಲಿ ಅನಾದಿಕಾಲದಿಂದ ನಾಗಾರಾಧನೆ ನಡೆದುಕೊಂಡು ಬಂದಿದೆ ಎಂದು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು. ಅವರು ಮುನಿಯಾಲು ಗೋಧಾಮದಲ್ಲಿ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ನಡೆದ ಸಮಾಲೋಚನಾ ಸಭೆ, ಕಚೇರಿ ಉದ್ಘಾಟನೆ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ನಾಗಾರಾಧನೆಯಿಂದ ಸಂತಾನ ಭಾಗ್ಯ, ಸಂಸಾರಿಕ ಸುಖ–ಶಾಂತಿ, ನೆಮ್ಮದಿ ಲಭಿಸುವುದರ ಜೊತೆಗೆ ಚರ್ಮರೋಗ ನಿವಾರಣೆ ಹಾಗೂ ಕೌಟುಂಬಿಕ ಮನಸ್ತಾಪಗಳ ಪರಿಹಾರವಾಗುತ್ತದೆ ಎಂದರು. ರಾಮಕೃಷ್ಣ ಆಚಾರ್ ಅವರು “ಪ್ರಕೃತಿಯಿಂದ ಪ್ರಕೃತಿಗೆ” ಎಂಬ ಪರಿಕಲ್ಪನೆಯಲ್ಲಿ ನಾಗಮಂಡಲ ಹಮ್ಮಿಕೊಂಡಿದ್ದು, ಆಧುನಿಕತೆ, ವಿಜ್ಞಾನ, ಕೃಷಿ, ಪ್ರಕೃತಿ ಹಾಗೂ ಆಧ್ಯಾತ್ಮವನ್ನು ಒಗ್ಗೂಡಿಸಿ ಇಡೀ ಜಿಲ್ಲೆಗೆ ಮಾದರಿಯಾಗುವಂತೆ ಅತ್ಯಂತ ಶ್ರದ್ಧೆಯಿಂದ ಸಿದ್ಧತೆ ನಡೆಸುತ್ತಿದ್ದಾರೆ. ಈ ನಾಗಮಂಡಲ ಯಶಸ್ವಿಯಾಗಲಿ ಎಂದು ಅವರು ಆಶೀರ್ವಚಿಸಿದರು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ರಾಮಕೃಷ್ಣ ಆಚಾರ್ ಅವರು ಉದ್ಯಮದಲ್ಲಿ ಯಶಸ್ಸು ಕಂಡು ನಂತರ ಸಾವಯವ ಕೃಷಿ ಹಾಗೂ ಗೋಸಂರಕ್ಷಣೆಯತ್ತ ತಿರುಗಿದ್ದಾರೆ. ಗೋದಾಮಿನ ಮೂಲಕ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಿದ್ದು, ರೈತರ ಪ್ರೋತ್ಸಾಹಕ್ಕಾಗಿ ನಾಗಮಂಡಲೋತ್ಸವದಲ್ಲಿ ರೈತ ಪೀಠ ಪ್ರಶಸ್ತಿ ನೀಡಲಾಗುತ್ತಿದೆ. ದೊಂದಿ ಬೆಳಕಿನಲ್ಲಿ ನಡೆಯುವ ನಾಗಮಂಡಲಕ್ಕೆ ಸ್ಥಳೀಯರು ಸೇರಿದಂತೆ ಎಲ್ಲರೂ ಬೆಂಬಲ ನೀಡಬೇಕೆಂದು ಕರೆ ನೀಡಿದರು. ಸಂಜೀವಿನಿ ಫಾರ್ಮ್ ಗೋದಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ನಾವು ಹಣ, ಪ್ಲಾಟ್ ಮತ್ತು ವ್ಯವಹಾರಗಳ ಹಿಂದೆ ಹೋಗಿ ಪ್ರಕೃತಿಯನ್ನು ಮರೆತಿದ್ದೇವೆ. ಪ್ರಕೃತಿಯೇ ದೇವರು ಎಂಬ ಅರಿವು ಮಕ್ಕಳಲ್ಲಿ ಬೆಳೆಸಬೇಕು. ಗೋಆಧಾರಿತ ಕೃಷಿಯ ಮಹತ್ವವನ್ನು ತಿಳಿಸಬೇಕು. ಪ್ರಕೃತಿ ಆರಾಧನೆಯ ಭಾಗವಾಗಿ ಕೊರಂಗ್ರಪಾಡಿಯ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿಗಳ ಮಾರ್ಗದರ್ಶನದಲ್ಲಿ ಏಕಪವಿತ್ರ ನಾಗಮಂಡಲ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಬೆಂಬಲ ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ಶ್ರೀಮತಿ ಸವಿತಾ ರಾಮಕೃಷ್ಣ ಆಚಾರ್, ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಶೆಟ್ಟಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್ ಉಪಸ್ಥಿತರಿದ್ದರು. ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಸಾಣೂರುಗುತ್ತು ದೇವಿ ಪ್ರಸಾದ್ ಶೆಟ್ಟಿ ಉಪ ಸಮಿತಿಗಳ ವಿವರ ನೀಡಿಸಿ ವಂದಿಸಿದರು. ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿದರು. ಪುರೋಹಿತ್ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.