

ಮುನಿಯಾಲು ನಾಗಮಂಡಲಕ್ಕೆ ನಾಗಸಾಧುಗಳು

ಹೆಬ್ರಿ, ಫೆ. 18: ಹೆಬ್ರಿ ಸಮೀಪದ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 19ರಿಂದ 21ರವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲ ಮಹೋತ್ಸವಕ್ಕೆ ಬುಧವಾರ 10ಕ್ಕೂ ಹೆಚ್ಚು ನಾಗಸಾಧುಗಳು ಧಿಢೀರ್ ಭೇಟಿ ನೀಡಿ ಆಶೀರ್ವಾದ ನೀಡಿದರು.
ಪವಾಡದಂತೆಯೇ ನಡೆದ ಈ ಭೇಟಿ ಭಕ್ತರಲ್ಲಿ ಭಕ್ತಿ ಭಾವನೆ ಮೂಡಿಸಿತು. ನಾಗಸಾಧುಗಳು ಗೋಧಾಮಕ್ಕೆ ಆಗಮಿಸಿ ನಾಗಮಂಡಲ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲೆಂದು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಗೋಧಾಮದ ಸವಿತಾ ಆರ್. ಆಚಾರ್, ರಕ್ಷತ್ ಆರ್. ಆಚಾರ್, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಯ ಪ್ರಮುಖರು ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿಗಳು ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.



























