

ವಾರದ ಬೆಳಕು
ಮುಕ್ತ ಮನಸ್ಸಿನಿಂದ “ಕೇಳು” – ಧೈರ್ಯದಿಂದ “ಕೇಳು”
ಕೇಳು… ಯಾವ ವಿಷಯವನ್ನೇ ಆಗಲಿ ಮುಕ್ತ ಮನಸ್ಸಿನಿಂದ ಕೇಳು. ಹೇಳುವವರೇ ಯಾರೇ ಆಗಿರಲಿ, ಅವರು ಏನು ಹೇಳುತ್ತಾರೆ ಎನ್ನುವುದನ್ನು ವಿದ್ಯಾರ್ಥಿಯಂತೆ ಕೇಳು. ಹೇಳುವವನ ಜಾತಿ, ಮತ ಧರ್ಮ, ಪಂಥ – ಪಂಗಡ, ವರ್ಗ – ವಯಸ್ಸು – ಲಿಂಗ ಯಾವುದೂ ಹೇಳುವವರ ಮಾತು ಕೇಳಿಸಿಕೊಳ್ಳುವ ಕಿವಿಗಳಿಗೆ, ಮನಸ್ಸುಗಳಿಗೆ ಅಡ್ಡಿಯಾಗಬಾರದು, ತಡೆಯೊಡ್ಡಬಾರದು. ಇದಕ್ಕಾಗಿಯೇ ಎಲ್ಲಿಯೇ ಆಗಲಿ, ಯಾವಾಗಲೇ ಇರಲಿ ಕೇಳುಗರು ಯಾವತ್ತೂ
ಮಗು ಮನಸ್ಸಿನಿಂದ ಕೇಳಿಸಿಕೊಳ್ಳಬೇಕು.
ಹೀಗೆ ಆಲಿಸುವಾಗ “ನನಗೆ ಗೊತ್ತಿದೆ” ಎಂಬ ಅಹಂ ಮಾತ್ರ ಬೇಡ, ಇರಲೇಬಾರದು.
ಕೇಳುವಾಗ, ತಿಳಿದುಕೊಳ್ಳಬೇಕೆಂಬ ಭಾವವಷ್ಟೇ ನಮ್ಮಲ್ಲಿರಬೇಕು. ಹೇಳುವವರು ಹೇಳುವುದರಲ್ಲಿ ಕೆಲವು, ಹಲವು ನಮಗೆ ತಿಳಿದದ್ದೇ ಇರಲೂಬಹುದು. ಇದರ ಹೊರತೂ ಕೆಲವಾದರೂ ನಮಗೆ ತಿಳಿದಿಲ್ಲದ್ದು, ಅರಿವಿಲ್ಲದ್ದು ಇರಬಹುದು, ಇದ್ದೇ ಇರುತ್ತದೆ. ಒಂದೇ ಒಂದು ಸಣ್ಣ ವಿಷಯವಾದರೂ, ಆ ಸಣ್ಣ ವಿಷಯಕ್ಕಾಗಿ ಕಿವಿಗೊಟ್ಟು, ಗಮನಕೊಟ್ಟು, ಆಸಕ್ತಿಯಿಂದ ಕೇಳುವಂತವರಾಗಬೇಕು.
ಕೇಳುವಾಗ, ಕೇಳುವಲ್ಲಿಗೆ ಮನಸ್ಸು ಕಾಲಿಮಾಡಿಟ್ಟು ಹೋಗುವುದು ಬಹಳ ಮುಖ್ಯ. ತುಂಬಿದ ಕೊಡಪಾನಕ್ಕೆ ಮತ್ತೆ ನೀರು ತುಂಬಿಸಲಾಗುವುದಿಲ್ಲ.
ಹೇಳುವವನು ತಿಳಿದವನು ಎಂಬ ಭಾವನೆ ಹಲವರಲ್ಲಿರುತ್ತದೆ. ಆದರೆ ಇದು ಪೂರ್ಣ ನಿಜವಲ್ಲ. ತಿಳಿದುಕೊಳ್ಳಬೇಕೆಂಬ ಮುಕ್ತ ಮನಸ್ಸಿನಿಂದ ಅಹಂ ಬಿಟ್ಟು ಕೇಳುವಾತನೇ ಬಹುತೇಕವಾಗಿ ತಿಳಿದವನೇ ಆಗಿರುತ್ತಾನೆ. ಈ ಸತ್ಯದ ಅರಿವು ಕೇಳುತ್ತಿರುವಾಗ ನಮ್ಮ ಅರಿವಿಗೆ ಬಾರದೇ ಇರುವುದಿಲ್ಲ.
ಕೇಳುವಾಗ, ಕೆಲ ನಿರ್ಧಿಷ್ಟ ವಿಷಯಗಳ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕೆಂದು ಅನಿಸುವುದು ಇದ್ದೇ ಇದೆ, ಇರಲೇಬೇಕು. ಈ ರೀತಿಯ ಹೆಚ್ಚೆಚ್ಚು ತಿಳಿದುಕೊಳ್ಳುವ ಆಸಕ್ತಿ, ಕುತೂಹಲವೇ ನಮ್ಮನ್ನು ಇನ್ನೊಂದು, ಮತ್ತೊಂದು, ಮಗುದೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ನಮ್ಮನ್ನು ನಿಜವಾದ ಅರ್ಥದಲ್ಲಿ ಜೀವಂತವಾಗಿ ಮುನ್ನಡೆಸುತ್ತದೆ. ಈ ಮುನ್ನಡೆಯಲ್ಲಿಯೇ, ಮುನ್ನಡೆಯಿಂದಲೇ ಜೀವನೋತ್ಸಾಹ, ಲವಲವಿಕೆ, ಅರಿವಿನ ವಿಸ್ತಾರ…
ಜ್ಞಾನದಾಹ ನಮ್ಮಲ್ಲಿರಬೇಕು. ಜ್ಞಾನದ ದಾಹವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನದ ಪ್ರಕ್ರಿಯೆಯಲ್ಲಿಯೇ ಮನುಷ್ಯನಾಗುತ್ತಾನೆ, ಸುಜ್ಞಾನಿ.
ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಕೇಳಬೇಕು. ಆದರೆ ಕೇಳಿಸಿಕೊಂಡದ್ದೆಲ್ಲವನ್ನು ಒಪ್ಪಬೇಕೆಂದೇನೂ ಇಲ್ಲ. ಕೇಳಿದ್ದೆಲ್ಲವೂ ಸತ್ಯವೆಂದೂ ನಂಬಲೂಬಾರದು. ಇಲ್ಲಿ ನಾವು ವಿವೇಕವನ್ನೂ, ವಿವೇಚನೆಯನ್ನೂ ಬಳಕೆ ಮಾಡಿಕೊಳ್ಳುವುದು ಅತೀ ಅಗತ್ಯ.
ಬೇಕಾದ್ದನ್ನು ಇಟ್ಟುಕೊಳ್ಳುವುದು, ಬೇಡವಾದುದನ್ನು ಬಿಟ್ಟುಬಿಡುವುದು. ಅವರು ಹಾಗೆ ಹೇಳಿದರು, ಇವರು ಹೀಗೆ ಹೇಳಿದರೆಂದು ನಾವು ನಮ್ಮನಡೆ ನುಡಿಯಲ್ಲಿ ತಪ್ಪು ಹಾದಿ ತುಳಿಯಬಾರದು. ಸಾವಿರ ಜನ ಸಾವಿರ ಹೇಳಬಹುದು. ಸತ್ಯ – ಅಸತ್ಯ, ತಪ್ಪು – ಸರಿಗಳನ್ನು ಅರಿತುಕೊಳ್ಳುವ ಮತ್ತು ಹೆಚ್ಚು ಬಲ್ಲವರಿಂದ ಮತ್ತೆ ಮತ್ತೆ ಕೇಳಿ ತಿಳಿದುಕೊಳ್ಳುವುದಾಗಬೇಕು. ಹೀಗೆ ತಿಳಿದುಕೊಂಡು ಒಂದು ಅಭಿಪ್ರಾಯಕ್ಕೆ ನಾವು ಬರಬೇಕಾಗುತ್ತದೆ. ಇಂಥ ಅಭಿಪ್ರಾಯಗಳೂ, ನಿಲುವುಗಳೂ ಅಂತಿಮ ಸತ್ಯ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ ಎಲ್ಲರ ಉದ್ಧೇಶವೂ ಸತ್ಯಾನ್ವೇಷಣೆಯೇ ಆಗಿದೆ. ಈ ಸತ್ಯಾನ್ವೇಷಣೆಯ ಮಾರ್ಗದಲ್ಲಿ ನಾವು ಸದಾ ವಿದ್ಯಾರ್ಥಿಯಾಗಿರಬೇಕು. ಇದು ಬಹಳ ಮುಖ್ಯವಾದುದು.
ಎಲ್ಲವನ್ನೂ ಕೇಳಿಸಿಕೊಳ್ಳುವುದರ ಜೊತೆಗೆ, ನಾವು ಯಾರಿಗಾದರೂ ಏನನ್ನಾದರೂ ಹೇಳಲೇಬೇಕು ಎಂದು ನಮಗನಿಸಿದರೆ ಹೇಳುವ ಮತ್ತು ಅಗತ್ಯವಿದ್ದರೆ ಕೇಳುವ ಕೆಲಸವನ್ನೂ ಮಾಡಬೇಕು, ಮಾಡಬಹುದು.
ಈ ಹೇಳುವ ಮತ್ತು ಕೇಳುವುದು ಎಂದರೆ ಇಲ್ಲಿ ನಮಗೆ ತಿಳಿದಿರುವುದನ್ನು ಸೂಕ್ತ ಸಂದರ್ಭದಲ್ಲಿ ಯೋಗ್ಯ ರೀತಿಯಲ್ಲಿ ಹೇಳುವುದು ಮತ್ತು ಸಂಬಂಧಿಸಿದ ವ್ಯಕ್ತಿಗಳ ಮುಂದೆ ಅಥವಾ ಸಮಾಜದ ಮುಂದೆ ಇಲ್ಲವೇ ವ್ಯವಸ್ಥೆಯ ಮುಂದೆ, ಪ್ರಭುತ್ವದ ಮುಂದೆ ಪ್ರಶ್ನಿಸುವುದೂ ಆಗುತ್ತದೆ, ಆಗಬೇಕು.
ಹೀಗೆ ಹೇಳುವಾಗ ಮತ್ತು ಪ್ರಶ್ನೆ ಕೇಳುವಾಗಲೂ ಒಂದು ರೀತಿ – ನೀತಿ ಪಾಲಿಸುವುದು ಅತೀ ಅಗತ್ಯ. ಭಾಷೆಯ ಬಳಕೆಯಲ್ಲಿ ಜಾಗ್ರತೆ ವಹಿಸಬೇಕು. ಏಕವಚನ, ವ್ಯಂಗ್ಯ, ಅಪಹಾಸ್ಯ, ಕೀಳು ಮಟ್ಟದ ಪದ ಪ್ರಯೋಗ, ಬೈಯ್ಗುಳ, ಯಾರನ್ನಾದರೂ ಸಣ್ಣದು ಮಾಡುವುದು ಇತ್ಯಾದಿಗಳನ್ನು ಮಾಡಲೇಬಾರದು.
ಮೌಖಿಕವಾಗಿರಲಿ, ಬರೆಹದ ಮೂಲಕವಾಗಿರಲಿ ಹೇಳಬೇಕೆನಿಸಿದ್ದನ್ನು ಹೇಳುವಾಗ, ಪ್ರಶ್ನೆಸಬೇಕು ಎಂದೆನಿಸಿದ್ದನ್ನು ಪ್ರಶ್ನಿಸುವಾಗ ಅವರ ಜೊತೆಗೆ ಅತ್ಯಂತ
ಗೌರವದ ಭಾವವಿರಲಿ, ಸಹಜವಾದ, ವಿನಮ್ರತೆಯಿರಲಿ, ಪ್ರಾಮಾಣಿಕತೆಯಿರಲಿ, ಸೌಹಾರ್ದವಿರಲಿ ಮತ್ತು ಇರಲೇಬೇಕು.
ನಡೆ ನುಡಿಯಲ್ಲಿ ತಪ್ಪಾದಾಗ ಅದು ಅನಗತ್ಯ ವಾಗ್ವಾದಗಳಿಗೆ, ಸಂಘರ್ಷಗಳಿಗೆ ಕಾರಣವಾಗಬಹುದು. ಆದ್ದರಿಂದ ಕೇಳುವ ಕೆಲಸವನ್ನು ತಾಳ್ಮೆಯಿಂದಲೇ ಮಾಡುವುದು ಕೇಳುವವನ ಜಬಾಬ್ದಾರಿಯಾಗುತ್ತದೆ. ಅಂತಿಮವಾಗಿ ಎಲ್ಲವನ್ನೂ ನಿರ್ಧರಿಸುವುದು ನಡೆ – ನುಡಿ ಎಂಬುದನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕು.
~ ಶ್ರೀರಾಮ ದಿವಾಣ, ಉಡುಪಿ.




































