ಮಾಲಿನ್ಯದಿಂದ ಹೈರಾಣಾದ ಜನತೆ: ಎಂಎಸ್‌ಇಝೆಡ್ ಗೇಟ್‌ಗೆ ಮುತ್ತಿಗೆ, ರಸ್ತೆ ತಡೆದು ಆಕ್ರೋಶ

Picture of RB NEWS

RB NEWS

Bureau Report

ಮೂಡುಬಿದಿರೆ: ಕೈಗಾರಿಕಾ ಘಟಕದಿಂದ ಹೊರಸೂಸುವ ಧೂಳಿನ ಕಣಗಳು ಮನೆ-ಮನೆಗೆ ವ್ಯಾಪಿಸುತ್ತಿವೆ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯದಿಂದ ನೆಮ್ಮದಿಯ ಬದುಕು ಕಷ್ಟವಾಗಿದೆ, ಉಸಿರಾಟದ ಸಮಸ್ಯೆಯೂ ಕಾಡುತ್ತಿದೆ. ವರ್ಷಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಕಾಣದೆ ಆಕ್ರೋಶಗೊಂಡ ಬಜಪೆ ಪರಿಸರದ ಜನರು ಇದೀಗ ಬೀದಿಗಿಳಿದಿದ್ದಾರೆ.

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಂತಿಗುಡ್ಡೆ, ಧೂಮಾವತಿ ಧಾಮ, ಒಡ್ಡಿದಕಳ ಹಾಗೂ ಕೊಂಚಾರು ಪ್ರದೇಶಗಳಲ್ಲಿ ಎಂಎಸ್‌ಇಝೆಡ್‌ನ ಜಿಎಂಪಿಎಲ್ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ಖಂಡಿಸಿ ಮಂಗಳವಾರ ಎಂಎಸ್‌ಇಝೆಡ್ ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಸಾರ್ವಜನಿಕರು ಹಾಗೂ ಸ್ಥಳೀಯಾಡಳಿತದ ಪ್ರತಿನಿಧಿಗಳು ರಸ್ತೆ ತಡೆ ನಡೆಸಿ ಘಟಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಎಂಪಿಎಲ್ ಘಟಕದಿಂದ ಹೊರಬರುವ ಪುಡಿಯಂತಹ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಹರಡಿ ವಸತಿ ಪ್ರದೇಶಗಳನ್ನು ತಲುಪುತ್ತಿವೆ. ಮನೆಗಳ ಸುತ್ತಮುತ್ತ ಧೂಳು ಆವರಿಸುತ್ತಿದ್ದು, ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂಬುದು ಸ್ಥಳೀಯರ ಗಂಭೀರ ಆರೋಪ. ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದ ನಡುವೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯಿಂದ ಮುಕ್ತಿ ನೀಡುವಂತೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸರು-ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ

ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ರಸ್ತೆ ತಡೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ರಸ್ತೆಯಲ್ಲೇ ಸೊಪ್ಪು ಹಾಕಿ ಪ್ರತಿಭಟನೆ ಮುಂದುವರಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ರಸ್ತೆ ತಡೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಬಜಪೆ ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಜಿಎಂಪಿಎಲ್ ಘಟಕದಿಂದ ಶಾಂತಿಗುಡ್ಡೆ, ಧೂಮಾವತಿ ಧಾಮ, ಒಡ್ಡಿದಕಳ ಹಾಗೂ ಕೊಂಚಾರು ಭಾಗದ ನಿವಾಸಿಗಳು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಂಪನಿ ಆರಂಭವಾದ ದಿನಗಳಿಂದಲೇ ಪರಿಸರದ ಜನರು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ವಿವಿಧ ಹಂತಗಳಲ್ಲಿ ದೂರು ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಇನ್ನಾದರೂ ತಕ್ಷಣ ಸ್ಪಂದಿಸಿ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಹಲವು ಕೌನ್ಸಿಲರ್‌ಗಳು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top