ಮಾನವ ಕಳ್ಳ ಸಾಗಾಟ ಪ್ರಕರಣದಲ್ಲಿ ತುತ್ತಾದವರು ಹೆಚ್ಚಾಗಿ ಮಕ್ಕಳು

Picture of RB NEWS

RB NEWS

Bureau Report

ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ(ರಿ) ಕಾರ್ಕಳ, ಮಹಿಳಾ ತರಬೇತುದಾರರ ಸಂಚಲನ ಉಡುಪಿ ಜಿಲ್ಲೆ ಹಾಗೂ ತಾಲೂಕು ಪಂಚಾಯತು ಕಾರ್ಕಳ ಇದರ ಜಂಟೀ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ತಾಲೂಕು ಪಂಚಾಯತು ಸಭಾಂಗಣ ಕಾರ್ಕಳ ಇಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿದ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಅಬುತಾಹಿರ್ ಅವರು ಮಾನವ ಕಳ್ಳ ಸಾಗಾಣಿಕೆಯಲ್ಲಿ ಹೆಚ್ಚಾಗಿ ಮಕ್ಕಳನ್ನು ಬಳಸಲಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆ, ಜೀತಪದ್ಧತಿ ಮತ್ತು ಲೈಂಗಿಕ ಶೋಷಣೆ, ಮಾನವ ಅಂಗಾಂಗವನ್ನು ಕಳ್ಳತನ ಮಾಡಲು ಸಹ ನಡೆಯುತ್ತಿವೆ ಎಂದು ತಿಳಿಸಿದರು.
ಮಾನವ ಕಳ್ಳ‌ ಸಾಗಾಟವನ್ನು ತಡೆಗಟ್ಟುವ ಪ್ರಯತ್ನಕ್ಕೆ ಸರ್ವರ ನೆರವು ಮುಖ್ಯವೆಂದರು.

ಕಾರ್ಕಳ ನ್ಯಾಯವಾದಿಗಳ ಸಂಘ (ರಿ.)ದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿ, ಮಾನವ ಕಳ್ಳಸಾಗಾಟ ಪಿಡುಗು ತಡೆಗಟ್ಟಲು ಸಮಾಜವು ಕಾನೂನಿನೊಂದಿಗೆ ಕೈ ಜೋಡಿಸಬೇಕೆಂದರು.

ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಕೋಶಾಧಿಕಾರಿ ಆಶಾಲತಾ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಗೆ ಬಡತನವೇ ಮೂಲ ಕಾರಣವೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಕೀಲ ಪರಿಚಿತ್ ಚೌಟ ಮಾತನಾಡಿ ಕಾರ್ಕಳ ಮಾನವ ಕಳ್ಳ ಸಾಗಾಣಿಕೆ ತಡೆಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಮಾನವ ಕಳ್ಳ ಸಾಗಾಣಿಕೆ ಕಂಡು ಬಂದರೆ ಸಂಬಂಧಪಟ್ಟ ಏಳು ಇಲಾಖೆಗಳಿಗೆ ಮಾಹಿತಿ ನೀಡಬಹುದು. ಅದರ ಕುರಿತು ಸಮಗ್ರ ಮಾಹಿತಿ ಸಭೆಗೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್. ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ನಮ್ಮ ಮನೆಯ ಸಮಸ್ಯೆಯೆಂದು ತಿಳಿದು ಅದರ ತಡೆ ಬಗ್ಗೆ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಬೇಕೆಂದರು.

ಕಾರ್ಕಳ ತಾಲೂಕು ಪಂಚಾಯತು ಮೆನೇಜರ್ ಹರೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top