



ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣ – ಮೂರೇ ಗಂಟೆಯಲ್ಲಿ ಮೂವರು ಆರೋಪಿಗಳ ಬಂಧನ
ಉಡುಪಿ: ಕುರ್ಕಾಲು ಗ್ರಾಮದ ಶಂಕರಪುರದಲ್ಲಿ ಶನಿವಾರ ಬೆಳಗ್ಗೆ ನಡೆದ ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ ಮೂರು ಗಂಟೆಯೊಳಗೆ ಪತ್ತೆಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕುರ್ಕಾಲು ಗ್ರಾಮದ ಶಂಕರಪುರದ ಹೆಲೆನ್ ಡಿಸೋಜ (69) ಅವರು ತಮ್ಮ ಮನೆಯ ಹಿಂಭಾಗದಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಬಾಡಿಗೆ ರೂಮ್ ಇಲ್ಲದ ಕಾರಣ ಅವರು ಸಮೀಪದ ಇನ್ನೊಂದು ಮನೆ ಕಡೆ ತೆರಳಿದ್ದರು.
ಸ್ವಲ್ಪ ಸಮಯದ ಬಳಿಕ ಅವರಲ್ಲಿ ಒಬ್ಬರು ಮರಳಿ ಬಂದು ಹೆಲೆನ್ ಡಿಸೋಜ ಅವರ ಮೊಬೈಲ್ ನಂಬರ್ ಕೇಳಿದರು. ಅವರು ಮೊಬೈಲ್ ನಂಬರ್ ಹೇಳುತ್ತಿರುವಾಗ, ಆರೋಪಿಯು ಅವರ ಕುತ್ತಿಗೆಗೆ ಕೈ ಹಾಕಿ 28 ಗ್ರಾಂ ತೂಕದ, ಅಂದಾಜು ₹3,50,000 ಮೌಲ್ಯದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾದನು. ತಡೆಯಲು ಬಂದ ಹೆಲೆನ್ ಅವರ ಅಕ್ಕ ತೆರಜ ಅವರನ್ನು ದೂಡಿ ಹಾಕಿ, ಮೂವರು ಆರೋಪಿಗಳು ಪಲ್ಸರ್ ಬೈಕ್ನಲ್ಲಿ ಸ್ಥಳದಿಂದ ತಪ್ಪಿಸಿಕೊಂಡರು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ಷಿಪ್ರ ಪೊಲೀಸ್ ಕಾರ್ಯಾಚರಣೆ
ಘಟನೆಯ ತಕ್ಷಣವೇ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಮೀಪದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪಲ್ಸರ್ ಬೈಕ್ನಲ್ಲಿ ಮೂವರು ಆರೋಪಿಗಳು ಬಂದು ಕೃತ್ಯ ಎಸಗಿರುವುದು ದೃಶ್ಯದಲ್ಲಿ ಪತ್ತೆಯಾಯಿತು.
ಜಿಲ್ಲಾ ನಿಯಂತ್ರಣ ಕೊಠಡಿಯ ಮೂಲಕ ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಿಗೆ ಮಾಹಿತಿ ರವಾನಿಸಿ, ಸಿಸಿಟಿವಿ ಫೂಟೇಜ್ಗಳನ್ನು ಹಂಚಲಾಯಿತು. ತಕ್ಷಣ ನಾಕಾಬಂದಿ ನಡೆಸಲಾಗಿದ್ದು, ಕೃತ್ಯ ನಡೆದ ಮೂರರಿಂದ ನಾಲ್ಕು ಗಂಟೆಯೊಳಗಾಗಿ ಶಿರೂರ ಚೆಕ್ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದರು.
ಪೊಲೀಸರು ಆರೋಪಿಗಳಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆ ಕಾಪು ವೃತ್ತ ನಿರೀಕ್ಷಕ ಅಜ್ಜತ್ ಅಲಿ ಅವರ ಮಾರ್ಗದರ್ಶನದಲ್ಲಿ, ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಎಸ್ಸೆ ಸುನಿಲ್ ಕುಮಾರ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳ ತಂಡದಿಂದ ಯಶಸ್ವಿಯಾಗಿ ನೆರವೇರಿತು.
1





































