ಮಹಾ ಶಿವರಾತ್ರಿ : ಶಿವನಿಗೆ ಮಾಡಿಸ ಬಹುದಾದ ಪೂಜೆಗಳು :ಯಾವ ಪೂಜೆ ಮಾಡಿಸುವುದರಿಂದ ಏನು ಫಲ
– ಕೆ.ಸುಬ್ರಹ್ಮಣ್ಯ ಆಚಾರ್ಯ
ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಗೆ “ಮಾಸ ಶಿವರಾತ್ರಿ “ಎಂಬ ಹೆಸರಿದ್ದು ಮಾಘ ಮಾಸದ ಶಿವರಾತ್ರಿ “ಮಹಾ ಶಿವರಾತ್ರಿ” ಯಾಗಿದೆ .ಈ ಬಾರಿ ಈ ಪುಣ್ಯ ದಿನ ಫೆಬ್ರವರಿ ತಿಂಗಳ ದಿನಾಂಕ 26 ರಂದು ಬರುತ್ತಿದೆ .ಶಿವನ ಆರಾಧನೆ ಋಗ್ವೇದದಷ್ಟೆ ಪ್ರಾಚೀನವಾದದ್ದು. ಸ್ಕಂದ ,ಪದ್ಮ ,ಗರುಡ ಪುರಾಣಗಳಲ್ಲಿ ಈ ಕುರಿತು ಹಲವಾರು ಕಥೆಗಳಿವೆ.
ಪುರಾಣಗಳಲ್ಲಿ ಶಿವರಾತ್ರಿಯ ಮಹಿಮೆಗಳು : ಇಂದು ಶಿವನ ಜನ್ಮ ದಿನವೆಂದೂ , ಅವನು ಹಾಲಾಹಲ ವಿಷ ಕೂಡಿದ ದಿನವೆಂದೂ, ಶಿವ ಪರ್ವತಿ ವಿವಾಹವಾದ ದಿನವೆಂದೂ ,ಪುರಾಣಗಳಲ್ಲಿ ಉಕ್ತವಾಗಿದೆ. “ಮಾಘ ಕೃಷ್ಣ ಚತರ್ದಶ್ಯಾಮ್ ಶಿವ ಪೂಜಾ ಸುದರ್ಲಭಮ್ “ ಎಂಬ ವಚನ ಜಗಜ್ಜನಿತ. ಅನೇಕ ಪುರಾಣಗಳನ್ವಯ ಅಂದು ನಡು ರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಸ್ವಯಂ ಭೂ ವಾಗಿ ಜ್ಯೋತಿಲಿಂಗ ರೂಪದಲ್ಲಿ ಉದ್ಭವಿಸಿದ ದಿನ. ಸಮುದ್ರ ಮಥನ ಕಾಲದಲ್ಲಿ ಹಾಲಾಹಲ ವಿಷವನ್ನು ಕುಡಿದು ನೀಲಕಂಠ ನೆನಿಸಿದ ದಿನ . ಧರ್ಮ ಸಿಂಧುವಿನಲ್ಲಿ ಮಹಾ ಶಿವರಾತ್ರಿಯ ಆಚರಣೆಯ ವಿಧಾನವನ್ನು ಸ್ಪಷ್ಟ ಪಡಿಸಲಾಗಿದೆ. ಶುಚರ್ಭೂತರಾಗಿ, ಸತ್ ಸಂಕಲ್ಪ ಮಾಡಿ ತ್ರಯೋದಶಿಯಂದು ಒಪ್ಪತ್ತು ಊಟ ಮಾಡಿ ಚತುರ್ದಶಿಯಂದು ಉಪವಾಸ ಹಾಗೂ ಜಾಗರಣೆ ಮಾಡಿ ಅಮಾವಾಸ್ಯೆಯಂದು ಊಟ ….ಇವು ಆಚರಣೆಯ ಕ್ರಮವಾಗಿದೆ.
ಶಿವಾರಾಧನೆಗೆ ನಮ್ಮ ಯಾವುದೇ ಐಶ್ವರ್ಯ ಅಡಂಭರ ಬೇಡ. ಶಿವನನ್ನು ಲಿಂಗ ರೂಪದಲ್ಲಿ ಪೂಜೆ ಮಾಡುವುದು ಭಾರತೀಯರಲ್ಲಿ ಬಹು ವಿಶೇಷವಾಗಿ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ .
ಶೈವಾಗಮದಲ್ಲಿ ಲಿಂಗ ತತ್ವ ಮಹತ್ತರವಾದ ಅರ್ಥವನ್ನು ಒಳಗೊಂಡಿದೆ. ಲಿಂಗವೆನ್ನುವುದು ಇಡೀ ಬ್ರಹ್ಮಾಂಡದ ಪ್ರತೀಕ. ಅದಕ್ಕೆ ಕೈ-ಕಾಲು- ಮುಖವಿಲ್ಲ. ಅದು ಸಾಕಾರವೂ ಹೌದು. ನಿರಾಕಾರವೂ ಹೌದು. ಅದು ನಮ್ಮನ್ನು ಸಾಕಾರದಿಂದ ನಿರಾಕಾರದತ್ತ , ಸಗುಣೋಪಾಸನೆಯಿಂದ –ನರ್ಗುಣೋ ಪಾಸನೆಯತ್ತ ಕರೆದೊಯ್ಯುತ್ತದೆ. ಯಾರು ಶಿವ ಲಿಂಗವನ್ನು ಪ್ರತಿಷ್ಠೆ ಮಾಡಿ ಪೂಜೆ ಮಾಡಿ ಕೊಂಡು ಬರುತ್ತಾರೋ ,ಅವರೇ ಸಾಕ್ಷಾತ್ ಶಿವ ಸ್ವರೂಪ ಉಳ್ಳವರಾಗುತ್ತಾರೆ. ಅಂದರೆ ಜೀವನದ ಅಂತ್ಯದಲ್ಲಿ ಮೋಕ್ಷವಾಸಿಗಳಾಗುತ್ತಾರೆ.
ಬಿಲ್ವ ಪತ್ರೆ ,ಬಾವಿಯ ಶುದ್ಧವಾದ ನೀರು ,ತುಂಬೆ ಹೂ ,ಬಿಳಿ ಎಕ್ಕ ದ ಹೂ ,ಒಳ್ಳೆಯ ಮನಸ್ಸಿನ ಭಕ್ತಿ,, ಭಾವನೆ ಇದ್ದರೆ ಸಾಕು. ಪ್ರತಿನಿತ್ಯ ಹನ್ನೊಂದು ಕೊಡಪಾನ ನೀರನ್ನು ರುದ್ರ ಪಾರಾಯಣದ ಮೂಲಕ ಅಭಿಷೇಕ ಮಾಡ ಬೇಕು. ತ್ರಿಗುಣಾಕಾರನೂ,ತ್ರಿನೇತ್ರನೂ , ತ್ರಿಶೂಲಧಾರಿಯೂ ,ಆದ ಲಿಂಗ ರೂಪಿ ಶಿವನನ್ನು , ತ್ರಿದಳಗಳಿಂದ , ಕೂಡಿದ ಅಚ್ಛಿದ್ರವಾದ ಕೋಮಲವಾದ ಬಿಲ್ವ ಪತ್ರೆಯಿಂದ ಪೂಜಿಸಿದವನ ತ್ರಿಜನ್ಮ ಪಾಪ ಸಂಹಾರವಾಗುವುದೆಂದೂ ಪುರಾಣಗಳಲ್ಲಿ ಹೇಳಲಾಗಿದೆ.
ಬಿಲ್ವ ಪತ್ರೆಯಿಲ್ಲದ ಶಿವ ಪೂಜೆ ಅಪೂರ್ಣ ವೆನಿಸಿದೆ. ಶಿವನನ್ನು ಸಾತ್ವಿಕ ಜನರಷ್ಟೇ ಅಲ್ಲದೆ ತಾಮಸ ಗುಣ ಪ್ರಧಾನರಾದ ರಾಕ್ಷಸರೂ ಶಿವನ ಕುರಿತು ತಪಸ್ಸು ಮಾಡಿ ಅಪೂರ್ವ ಶಕ್ತಿಯನ್ನು ಸಿದ್ಧಿಯನ್ನು ಹೊಂದಿದವರೂ ಇದ್ದಾರೆ. ಶಿವನು ಅಭಿಷೇಕ ಪ್ರಿಯ . ಜಲಧಾರಾ ಪ್ರಿಯೋ ಶಿವ:’ “ರುದಮ್ ದ್ರಾವಯತಿ ಇತಿ ರುದ್ರ: “ಎಂದರೆ ತಾಪತ್ರಯಗಳನ್ನು ದೂರ ಮಾಡುವವನೇ ರುದ್ರ . ಶಿವನಲ್ಲಿ ಮಾನವನು ತಿಳಿದು ಕೊಳ್ಳುವ ಮುಖ್ಯ ಸಂದೇಶವೆಂದರೆ ,ತಲೆಯ ಮೇಲೆ ಚಂದ್ರನನ್ನು ಮೆರಿಸಿ ವಿಷವನ್ನು ತನ್ನ ಗಂಟಲಿನಲ್ಲಿ ಅಡಗಿಸಿಟ್ಟಂತೆ ಮಾನವನು ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ದೋಷವನ್ನು ಮರೆತು ತನ್ನ ಜೀವನವನ್ನು ಸಾಗಿಸಬೇಕು.
ಶಿವರಾತ್ರಿಯಂದು ಶಿವ ಸಾನ್ನಿಧ್ಯದಲ್ಲಿ ಇದ್ದುಕೊಂಡು ರುದ್ರಾಭಿಷೇಕ, ಶಿವ ಪೂಜೆ, ಶಿವ ಲೀಲಾಮೃತ ಕಥಾ ಶ್ರವಣ, ಶಿವ ಸಹಸ್ರನಾಮ ಪಾರಾಯಣ ,ಮಾಡಬೇಕು ಮಹಾ ಶಿವರಾತ್ರಿಯ ಒಂದು ದಿನ ಮಾಡಿದ ಶಿವ ಪೂಜೆಗೆ ,ಶಿವನ ಆರಾಧನೆಗೆ ಒಂದು ವರ್ಷವೆಲ್ಲ ಪ್ರತಿದಿನ ಶಿವ ಪೂಜೆ ಮಾಡಿದ ಪುಣ್ಯದ ಫಲ ಇದೆ. ಭಕ್ತ ಮರ್ಕಾಂಡೇಯನ ಕಥೆ , ಬೇಡರ ಕಣ್ಣಪ್ಪನ ಕಥೆ, ನೋಡಿದಾಗ ,ಶಿವನು ಅಲ್ಪ ಮೃತ್ಯುವನ್ನು ದೂರ ಮಾಡುವವನು ಎಂದು ತಿಳಿಯುತ್ತದೆ.
ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಇಳಿದು ಬರುವಾಗ ,ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿ ಕೊಂಡದ್ದರಿಂದ ,ವಿಚಲಿತನಾದ ಭಗೀರಥ ,ಶಿವ ಧ್ಯಾನದ ಮೂಲಕ ಶಿವನನ್ನು ಮೆಚ್ಚಿಸಿ ,ಗಂಗೆಯನ್ನು ಭೂಮಿಗೆ ಹರಿದು ಬರುವಂತೆ ಮಾಡಿದ ಪುಣ್ಯ ದಿನವೂ ಇದೇ ಆಗಿರುತ್ತದೆ. ಶಿವ ಮತ್ತು ರಾತ್ರಿ ಎಂಬ ಎರಡು ಶಬ್ದಗಳಲ್ಲಿ ರಾತ್ರಿ ಎಂದರೆ ಕತ್ತಲು,ಕತ್ತಲು ಎಂದರೆ ಅಜ್ಣಾನ ,ಅಜ್ಣಾವನ್ನು ಕಳೆದು ಸುಜ್ಣಾನವನ್ನು ಬೆಳಗಿಸು ಎಂದು ಶಿವನನ್ನು ಬೇಡುವ ದಿನವೇ ಶಿವರಾತ್ರಿ.
ಶಿವನು ಭಕ್ತರಿಂದ ಬಯಸುವುದು ನಿಷ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ,ಮಾನವ ತನ್ನ ಇಂದ್ರಿಯ ನಿಗ್ರಹ ,ಧ್ಯಾನ,ಸಂಯಮ, ಮತ್ತು ವಿಶ್ವಾಸದಿಂದ ಧ್ಯಾನಿದರೆ ಆತ ಪ್ರಸನ್ನಗೊಳ್ಳುತ್ತಾನೆ.
ಶಿವನಿಗೆ ಮಾಡಿಸ ಬಹುದಾದ ಪೂಜೆಗಳೆಂದರೆ :- ಜಲಾಭಿಷೇಕ ,ರುದ್ರಾಭಿಷೇಕ ,ಏಕಾದಶ ರುದ್ರಾಭಿಷೇಕ ,ಶತ ರುದ್ರಾಭಿಷೇಕ , ರಂಗ ಪೂಜೆ ,ಶಿವ ಸಹಸ್ರ ನಾಮಾರ್ಚನೆ, ,ಬಿಲ್ವ ಪತ್ರಾರ್ಚನೆ, ತುಲಾಭಾರ ಸೇವೆ , ಸೀಯಾಳಾಭಿಷೇಕ ತೆಂಗಿನ ಗಿಡದ ಅರ್ಪಣೆ, ,ಮೃತ್ಯುಂಜಯ ಜಪ ,ಮೃತ್ಯುಂಜಯ ಶಾಂತಿ , ಮೃತ್ಯುಂಜಯ ಹೋಮ ;ಗಂಡು ಕರುವಿನ ಅರ್ಪಣೆ, ಪಂಚಾಮೃತ ಅಭಿಷೇಕ ಸೇವೆ ,ಕ್ಷೀರಾಭಿಷೇಕ ,ಪಂಚಕ ಅಂದರೆ ಹತ್ತಿ ,ಕುಂಬಳಕಾಯಿ ಉಪ್ಪು ಕಬ್ಬಿಣದ ಕತ್ತಿ ಎಳ್ಳು ,ಎಳ್ಳೆಣ್ಣೆ ಅರ್ಪಣೆ ಮಾಡುವುದರಿಂದ ಮರಣದ ಬಾಗಿಲಿಗೆ ಬಂದವನು ಮೃತ್ಯು ದೋಷದಿಂದ ದೂರವಾಗುತ್ತಾನೆ , ಸೇವೆಗಳು.ಊರಿನಿಂದ ಊರಿಗೆ ಬದಲಾವಣೆ ಆಗುತ್ತದೆ . ಆದರೆ ಎಲ್ಲಾ ಸೇವೆಗಳ ಉದ್ದೇಶ ಒಂದೇ ಆಗಿರುತ್ತದೆ ತಾನು ಅನುಭವಿಸುತ್ತಿರುವ ಕಷ್ಟಗಳಿಂದ ದೂರವಾಗುವುದು ,”ಸತ್ಯಂ ಶಿವಂ ಸುಂದರಂ “ ಶಿವನೆಂದರೆ ಸತ್ಯವಾದುದು ಸುಂದರವಾದುದು.
































