ಮಹಾಮಸ್ತಕಾಭಿಷೇಕದಿಂದ ಆತ್ಮಶುದ್ಧಿ, ಮಾನವೀಯ ಮೌಲ್ಯಗಳ ಸಂದೇಶ

Picture of RB NEWS

RB NEWS

Bureau Report


ಕಾರ್ಕಳ: ಬೈರವರಸರು ಆಳಿದ ಕಾರ್ಕಳದ ಭೂಮಿ ಸಾಮಾನ್ಯವಾದುದಲ್ಲ. ಇದು ಪವಿತ್ರ ಭೂಮಿಯಾಗಿದ್ದು, ಸೂರ್ಯ, ಚಂದ್ರ ಹಾಗೂ ಭೂಮಿ ಇರುವವರೆಗೂ ಇಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನಡೆಯುತ್ತಿರಬೇಕು ಎಂದು ಪರಮಪೂಜ್ಯ 108 ಏಲಾಚಾರ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಕಾರ್ಕಳ ದಾನಶಾಲೆಯ ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಸೆ.25ರಂದು ನಡೆದ, 2027ರ ಫೆಬ್ರವರಿ 18ರಿಂದ 28ರವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರೀತಿ, ಪ್ರೇಮ ಹಾಗೂ ಭಕ್ತಿಭಾವದಿಂದ ಮಹೋತ್ಸವ ಯಶಸ್ವಿಯಾಗಿ ನೆರವೇರಲಿ. ಮಹೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರ ಪಾಪದೋಷಗಳು ನಿವಾರಣೆಯಾಗಿ, ಆತ್ಮಸಂಕಲ್ಪ ಮೂಡಲಿ ಎಂದು ಅವರು ಹಾರೈಸಿದರು.
ಕಾರ್ಕಳ ಶ್ರೀ ಜೈನಮಠದ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಮಾರ್ಗದರ್ಶನ ನೀಡಿ, ಮೂರ್ತಿಗಳ ರೂಪದಲ್ಲಿ ಪ್ರಕೃತಿಯನ್ನು ಪೂಜಿಸುವ ಪರಂಪರೆ ನಮ್ಮದಾಗಿದೆ. ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಆತ್ಮಶುದ್ಧಿ, ತ್ಯಾಗ, ಸಂಯಮ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರುವ ಮಹೋತ್ಸವವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿಯ ರತ್ನಾಕರ ರಾಜ್ ಅರಸರು ವಹಿಸಿದ್ದರು. ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಹಿರಿಯರಾದ ರತ್ನಾಕರ ರಾಜ ಅರಸು, ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಅನಂತರಾಜ್ ಪೂವಣಿ, ಕೋಶಾಧಿಕಾರಿ ಮೋಹನ್ ಪಡಿವಾಳ್ ಸೇರಿದಂತೆ ವಿವಿಧ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.
ಮಹಾಮಸ್ತಕಾಭಿಷೇಕ ಮಹೋತ್ಸವದ ಯಶಸ್ವಿಗಾಗಿ ಸಾರ್ವಜನಿಕರ ಸಹಕಾರ ಕೋರಿದ ಮನವಿ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸೌಮ್ಯ ರತ್ನವರ್ಮ ಜೈನ್ ಪ್ರಾರ್ಥಿಸಿದರು. ಡಾ. ಸುವಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಪಡಿವಾಳ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top