ಮಂಗಳೂರು: ಮಸೀದಿ ಮುಂದೆ ನಿಲ್ಲಿಸಲಾಗಿದ್ದ ಆಟೋ ರಿಕ್ಷಾದ ಡ್ಯಾಶ್ಬೋರ್ಡ್ನಲ್ಲಿ ಇರಿಸಿದ್ದ ₹26 ಸಾವಿರ ನಗದು ಹಣವನ್ನು ಕಳ್ಳತನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಗಳೂರು ಕುಂಟಿಕಾನದ ಎ.ಜೆ. ಆಸ್ತ್ರೆ ಕ್ವಾಟರ್ಸ್ ನಿವಾಸಿ ಧನೇಶ್ ಪಿ. (39) ಎಂದು ಗುರುತಿಸಲಾಗಿದೆ. ಈತ ದಾಸನ್ ಪೂಜಾರಿ ಅವರ ಪುತ್ರ. ಸೆ.18ರಂದು ಮಧ್ಯಾಹ್ನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಸೂರಲ್ಬಾಡಿ ಮಸೀದಿ ಎದುರು ಸಾರ್ವಜನಿಕರೊಬ್ಬರು ತಮ್ಮ ಆಟೋ ರಿಕ್ಷಾವನ್ನು ನಿಲ್ಲಿಸಿದ್ದರು. ಡ್ಯಾಶ್ಬೋರ್ಡ್ನಲ್ಲಿ ₹26 ಸಾವಿರ ನಗದು ಇಟ್ಟು ರಿಕ್ಷಾವನ್ನು ಲಾಕ್ ಮಾಡಿ ಪ್ರಾರ್ಥನೆಗೆ ತೆರಳಿದ್ದರು. ಬಳಿಕ ವಾಪಸ್ ಬಂದು ನೋಡಿದಾಗ ಡ್ಯಾಶ್ಬೋರ್ಡ್ನಲ್ಲಿದ್ದ ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯ ಆಧಾರದ ಮೇಲೆ ಸೆ.22ರಂದು ಕಾರ್ಯಾಚರಣೆ ನಡೆಸಿ ಧನೇಶ್ನನ್ನು ಬಂಧಿಸಿದ್ದಾರೆ. ಬಂಧಿತನಿಂದ ₹6 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹25 ಸಾವಿರ ಮೌಲ್ಯದ ಹೋಂಡಾ ಬೈಕ್ (KA-19-HJ-6254) ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆಯ ವೇಳೆ ಕಳ್ಳತನ ಮಾಡಿದ ಹಣದಲ್ಲಿ ₹15 ಸಾವಿರವನ್ನು ಪೋಸ್ಟ್ ಆಫೀಸ್ನ ಪಿಪಿಎಫ್ ಖಾತೆಗೆ ಜಮೆ ಮಾಡಿರುವುದಾಗಿ ಆರೋಪಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಧನೇಶ್ ವಿರುದ್ಧ ಈ ಹಿಂದೆ ಪಾಂಡೇಶ್ವರ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿಯೂ ಇದೇ ರೀತಿಯ ಕಳ್ಳತನ ಪ್ರಕರಣಗಳು ಬಿಎನ್ಎಸ್ ಕಲಂ 303(2)ರಡಿ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಬಜಪೆ ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿಸಿದ್ದಾರೆ.