
ಮಲ್ಪೆ ಪರಿಸರದಲ್ಲಿ ಅಕ್ರಮವಾಗಿ ನೆಲೆಸಿದ ಬಾಂಗ್ಲಾದೇಶಿಯರು
.ಉಡುಪಿ : ಮಲ್ಪೆ ಸಮೀಪದ ಹೂಡೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಮಲ್ಪೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಅಕ್ರಮ ನಿವಾಸಿಗಳ ಪೈಕಿ ಮೊಹಮ್ಮಆಗಿದ್ದಾಗದ್ ಮಾಣಿಕ್ ಹುಸೇನ್ (26) ಎಂಬಾತ ದುಬೈಗೆ ತೆರಳಲಿದ್ದು, ಬಜ್ಜೆಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಮಿಗ್ರೇಶನ್ ಅಧಿಕಾರಿಗಳ ತಪಾಸಣೆ ವೇಳೆ ಶುಕ್ರವಾರ ಸಿಕ್ಕಿಬಿದ್ದಿದ್ದ.

ನಕಲಿ ಪಾಸ್ ಪೋರ್ಟ್ ಹೊಂದಿದ್ದ ಆತನನ್ನು ಮಲ್ಪೆ ಪೊಲೀಸರಿಗೊಪ್ಪಿಸಲಾಗಿದ್ದು, ಆತನನ್ನು ವಿಚಾರಿಸಿದಾಗ ಆತ ಕಳೆದ 5 ವರ್ಷದಿಂದ ಗುಜ್ಜರಬೆಟ್ಟಿನಲ್ಲಿ ವಾಸವಾಗಿದ್ದು ಕಟ್ಟಡ ಕಾರ್ಮಿಕನಾಗಿದ್ದ ವಿಚಾರ ಬೆಳಕಿಗೆ ಬಂತು.
ವಶಕ್ಕೆ ಪಡೆದವರನ್ನು ಹಕೀಂ ಅಲಿ, ಸುಜೋನ್, ಇಸ್ಮಾಯಿಲ್, ಕರೀಂ, ಸಲಾಂ, ರಾಜಿಕುಲ್, ಮೊಹಮ್ಮದ್ ಸೋಜಿಬ್, ಕಾಜೋಲ್, ಉಸ್ಮಾನ್ ಎಂದು ಗುರುತಿಸಲಾಗಿದೆ.
ನಕಲಿಯಾಗಿ ಭಾರತೀಯ ದಾಖಲಾತಿ ಸೃಷ್ಟಿಸಿ ದೇಶಕ್ಕೆ ಪ್ರವೇಶ ಮಾಡಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳು ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ.
ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿವುದು ತಿಳಿದು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಪೈಕಿ ಉಸ್ಮಾನ್ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದನೆಂಬ ವಿಚಾರ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್. ಏನು ಹೇಳಿದರು?

ಉಡುಪಿ ಮಲ್ಪೆಯಲ್ಲಿ ಬಾಂಗ್ಲಾದೇಶಿಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮಲ್ಪೆ ಠಾಣಾ ವ್ಯಾಪ್ತಿಯ ಹೂಡೆಯಲ್ಲಿ ಏಳು ಮಂದಿ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಬಂತು. ಅಕ್ರಮ ನೆಲೆಸಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ಮಹಮ್ಮದ್ ಮಾಣಿಕ್ ಎಂಬವನು ಇವರ ಜತೆ ವಾಸವಿದ್ದ. ಆತ ನಕಲಿ ಪಾಸ್ ಪೋರ್ಟ್ ಬಳಸಿ, ಮಂಗಳೂರು ವಿಮಾನ ನಿಲ್ದಾಣ ಮೂಲಕ ದುಬೈಗೆ ತೆರಳಲು ಮುಂದಾಗಿದ್ದ. ಇಮಿಗ್ರೇಷನ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಲ್ಲಿ ಬಂಧಿತ ವ್ಯಕ್ತಿಯ ಮಾಹಿತಿಯನ್ನು ಇಮಿಗ್ರೇಶನ್ ಅಧಿಕಾರಿಗಳು ನಮಗೆ ನೀಡಿದ್ದಾರೆ. ಈತನ ಜತೆ ವಾಸವಿದ್ದ ಏಳು ಮಂದಿಯನ್ನು ಪತ್ತೆ ಮಾಡಲಾಗಿದೆ. ಸದ್ಯ ಏಳು ಮಂದಿ ನಮ್ಮ ವಶದಲ್ಲಿದ್ದಾರೆ, ವಿಚಾರಣೆ ನಡೆಸಿದಾಗ ಅವರ ಬಳಿ ನಕಲಿ ದಾಖಲೆಗಳು ಪತ್ತೆಯಾಗಿವೆ. ಕಳೆದ ಮೂರು ವರ್ಷಗಳಿಂದ ಈ ಕಡೆ ವಾಸವಿದ್ದಾರೆ. ನಕಲಿ ಆಧಾರ್ ಕಾರ್ಡ್ ಹೇಗೆ ಬಂತು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬಾರ್ಡರ್ ಹೇಗೆ ಕ್ರಾಸ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಲ್ಪೆ ಠಾಣೆಯಲ್ಲಿ ಕ್ರೈಂ ಸಂಖ್ಯೆ 138/24, 318, 319,336 ಕೇಸು ದಾಖಲಾಗಿದೆ. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ನ್ಯಾಯಾಲಯಕ್ಕೆ ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.




































