ಮನಪಾದ ಬಿಜೆಪಿ ಅಡಳಿತದ ದೌರ್ಜನ್ಯ ಅತ್ಯಂತ ಅಮಾನವೀಯ : ಸುನಿಲ್ ಕುಮಾರ್ ಬಜಾಲ್
ಮಂಗಳೂರು : ಅಂದು ಬಿಜೆಪಿ ಆಡಳಿತ ನಡೆಸಿದ್ದು ಟೈಗರ್ ಕಾರ್ಯಾಚರಣೆ.ಇಂದು ಉತ್ತರಪ್ರದೇಶದ ಯೋಗಿ ಆಡಳಿತದ ಕುಖ್ಯಾತಿ ಮಾದರಿಯ ಬುಲ್ಡೋಜರ್ ಕಾರ್ಯಾಚರಣೆಯನ್ನು ಮಂಗಳೂರಿನ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ನಡೆಸಿದ ಮನಪಾದ ಬಿಜೆಪಿ ಅಡಳಿತದ ದೌರ್ಜನ್ಯ ಅತ್ಯಂತ ಅಮಾನವೀಯವಾಗಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಕಟುವಾಗಿ ಟೀಕಿಸಿದ್ದಾರೆ.


ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅವರು ಯಾವುದೇ ಮುನ್ಸೂಚನೆ ನೀಡದೆ ಬಡಪಾಯಿ ಬೀದಿಬದಿ ವ್ಯಾಪಾರಸ್ಥರ ಮೇಲೆ ಧಾಳಿ ನಡೆಸಿ ತಾನು ಮಾಡಿದ ಮಹಾಪರಾಧವನ್ನು ಮುಚ್ಚಿಟ್ಟು,ಬೀದಿಬದಿ ವ್ಯಾಪಾರಸ್ಥರಿಂದ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತದೆ ಎಂಬ ಸುಳ್ಳನ್ನು ಬಿಚ್ಚಿಟ್ಟು ಮಂಗಳೂರಿನ ನಾಗರಿಕರನ್ನು ದಾರಿ ತಪ್ಪಿಸುತ್ತಿರುವ ಬಿಜೆಪಿ ಆಡಳಿತ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಲಿದೆ.
ಕಳೆದ 13 ವರ್ಷಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ, ಮುದ್ರಿಸಿದ ಗುರುತುಚೀಟಿಯನ್ನು ನೀಡಲಿಲ್ಲ,ಆಗಿಂದಾಗ್ಗೆ ಕರೆಯಬೇಕಾಗಿದ್ದ ಹಾಗೂ ಪ್ರತಿಯೊಂದನ್ನು ತೀರ್ಮಾನ ಮಾಡಬೇಕಾಗಿದ್ದ ಪಟ್ಟಣ ವ್ಯಾಪಾರ ಸಮಿತಿ (TVC)ಯ ಸಭೆಯನ್ನು ಕಳೆದ ಒಂದೂವರೆ ವರ್ಷದಲ್ಲಿ ಕರೆಯಲೇ ಇಲ್ಲ. ಇದ್ಯಾವುದನ್ನು ಮಾಡದೆ ಏಕಾಏಕಿಯಾಗಿ ಧಾಳಿ ನಡೆಸಿ, ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಹಕ್ಕುಗಳ ಸಂರಕ್ಷಣಾ ಕಾಯಿದೆಗೆ ವಿರುದ್ಧವಾಗಿ ನಡೆದುಕೊಂಡ ಮನಪಾ ಮೇಯರ್ ಕಮಿಷನರ್ ಇತರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ವಶಪಡಿಸಿಕೊಂಡ ವಸ್ತುಗಳನ್ನು ವಾಪಸ್ ನೀಡಬೇಕು, ಧ್ವಂಸಗೊಳಿಸಿದ ವಸ್ತುಗಳಿಗೆ ಸೂಕ್ತ ಪರಿಹಾರ ನೀಡಬೇಕು, ಕೂಡಲೇ ಬಡಪಾಯಿಗಳ ಮೇಲೆ ನಡೆಸುವ ಬುಲ್ಡೋಜರ್ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು ಇಲ್ಲದಿದ್ದಲ್ಲಿ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.







































