ಮಡಿಕೇರಿ: ಬಾಲಕಿಯೊಬ್ಬಳನ್ನು ಬರ್ಬರ ರೀತಿಯಲ್ಲಿ ಕೊಲೆಗೈದು ರುಂಡದೊಂದಿಗೆ ಆರೋಪಿ ಪರಾರಿಯಾಗಿರುವ ಅಮಾನುಷ ಕೃತ್ಯ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಟ್ಟು ಗ್ರಾಮದಲ್ಲಿ ಗುರುವಾರ ನಡೆದಿದೆ.
ಪೈಶಾಚಿಕ ಕೃತ್ಯ ಎಸಗಿದವ ಪ್ರಕಾಶ್ (32) ಸೂರ್ಲಬ್ಬಿ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ಮೀನಾ (16) ಹತ್ಯೆಗೀಡಾದ ದುರ್ದೈವಿ.


ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಾಲಕಿ ಮೀನಾ ಉತ್ತೀರ್ಣಳಾಗದ್ದು, ಈ ನಡುವೆಯೇ ಮನೆಯವರು ಆಕೆಯ ವಿವಾಹಕ್ಕೆಂದು ಅದೇ ಗ್ರಾಮದ ಪ್ರಕಾಶ್ ನೊಂದಿಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು.ಈ ಬಗ್ಗೆ ಮಾಹಿತಿ ತಿಳಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ 18 ವರ್ಷದ ನಂತರ ವಿವಾಹ ಮಾಡುವಂತೆ ಕಾನೂನಿನ ಅರಿವು ಮೂಡಿಸಿದ್ದರು. ನಂತರ ಎರಡೂ ಮನೆಯವರು ಮೀನಾಳಿಗೆ 18 ವರ್ಷ ತುಂಬಿದ ಮೇಲೆ ವಿವಾಹ ಮಾಡಲು ನಿಶ್ಚಿಯಿಸಿದರು. ಇದರಿಂದ ಕುಪಿತಗೊಂ ಪ್ರಕಾಶ್ ಸಂಜೆ ವೇಳೆಗೆ ಮೀನಾಳ ಮನೆಗೆ ಬಂದು ಆಕೆಯ ತಂದೆ, ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಮೀನಾಳನ್ನು ಸ್ವಲ್ಪ ದೂರ ಎಳೆದೊಯ್ದು ತಲೆಯನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾನೆ ಎಂದು ಕೊಡಗು ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಕಾಶ್ ತಲೆ ಮರೆಸಿಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.












