ಮಂಗಳೂರು : 1.15 ಕೋಟಿ ರೂ. ಹವಾಲಾ ಹಣ ದರೋಡೆ ಪ್ರಕರಣ: ಕಾರವಾರದ ಪೊಲೀಸ್ ಪೇದೆಯೇ ಸಂಚಿನ ರೂವಾರಿ!
RB NEWS
Bureau Report
1.15 ಕೋಟಿ ರೂ. ಹವಾಲಾ ಹಣ ದರೋಡೆ ಪ್ರಕರಣ: ಕಾರವಾರದ ಪೊಲೀಸ್ ಪೇದೆಯೇ ಸಂಚಿನ ರೂವಾರಿ!
ಚಿತ್ರ: ಎಐ
ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಬರೋಬ್ಬರಿ 1.15 ಕೋಟಿ ರೂ. ಹವಾಲಾ ಹಣ ದರೋಡೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಘಟನೆ ಸಂಚಲನ ಮೂಡಿಸಿದೆ.
ಹಣ ಸಾಗಿಸುತ್ತಿದ್ದ ಸತ್ಯನಾರಾಯಣ ಎಂಬವರನ್ನು ಅಪಹರಿಸಿ, ಅವರ ಬಳಿಯಿದ್ದ ಕೋಟ್ಯಂತರ ರೂಪಾಯಿ ದೋಚಲು ಸಂಚು ರೂಪಿಸಿದ ಆರೋಪದಲ್ಲಿ ಕಾರವಾರದ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀಶೈಲ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹವಾಲಾ ಹಣದ ಮೇಲೆ ಕಣ್ಣು: ಅಪಹರಣಕ್ಕೆ ಸಂಚು! ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ್, ಹವಾಲಾ ಹಣ ದರೋಡೆ ಮಾಡುವ ಉದ್ದೇಶದಿಂದ ಕಾರವಾರದ ಯುವಕರನ್ನು ಬಳಸಿಕೊಂಡು ಅಪಹರಣಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ. ದಾವಣಗೆರೆಯಿಂದ ಮಂಗಳೂರಿಗೆ ಬಸ್ಸಿನಲ್ಲಿ 1.15 ಕೋಟಿ ರೂ. ಹಣ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು, ಪೊಲೀಸರ ಸೋಗಿನಲ್ಲಿ ಸತ್ಯನಾರಾಯಣ ಅವರನ್ನು ಅಪಹರಿಸಿ ಹಣ ದೋಚಲಾಗಿತ್ತು. ಈ ಕುರಿತು ಸತ್ಯನಾರಾಯಣ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯ ವೇಳೆ ಅಪಹರಣ ಮತ್ತು ದರೋಡೆಯ ಹಿಂದಿನ ಸಂಚಿನಲ್ಲಿ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್ ಪಾತ್ರವಿರುವುದು ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಿ ಮಂಗಳೂರಿಗೆ ಕರೆತರಲಾಗಿದೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಈ ಕೃತ್ಯಕ್ಕೆ ಶ್ರೀಶೈಲ್ ಬಳಸಿಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಡುಪಿ ಜಿಲ್ಲೆಯ ಕಾಪು ನಿವಾಸಿ ಅಜೀಜ್, ಹಳಿಯಾಳದ ನಸ್ರುಲ್ಲಾ ಖಾನ್, ಕಾರವಾರದ ನಿತ್ಯಾನಂದ, ಮಂಗಳೂರು ಫರಂಗಿಪೇಟೆಯ ಖಾಲಿದ್ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಶ್ರೀಶೈಲ್ ಎಂದು ಗುರುತಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಗಣೇಶ ಕೋಳಂಕರ್ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಲ್ಲದೆ, ದಾವಣಗೆರೆಯ ಮತ್ತೊಬ್ಬ ಪೊಲೀಸ್ ಅಧಿಕಾರಿಯೂ ಪ್ರಕರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪೇದೆ ಅಮಾನತು; ಪೊಲೀಸ್ ಇಲಾಖೆಯಲ್ಲಿ ಸಂಚಲನ! ಹವಾಲಾ ಹಣ ದರೋಡೆ ಮತ್ತು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀಶೈಲ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅಮಾನತುಗೊಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಅಪಹರಣ ಮತ್ತು ಕೋಟ್ಯಂತರ ರೂಪಾಯಿ ದರೋಡೆ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ. ಈ ಕೃತ್ಯದ ಹಿಂದೆ ಇನ್ನೂ ಯಾರ್ಯಾರ ಕೈವಾಡವಿದೆ ಮತ್ತು ದರೋಡೆಗೀಡಾದ ಹಣದ ಸಂಪೂರ್ಣ ಜಾಡು ಪತ್ತೆಯಾಗಿದೆಯೇ ಎಂಬುದರ ಕುರಿತು ಮಂಗಳೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ವಿವರ ಲಾಲ್ಬಾಗ್ ಸಮೀಪ ವ್ಯಕ್ತಿಯ ಅಪಹರಣ ಮಾಡಿ 1.15 ಕೋಟಿ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆದ ದಿನವೇ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆತನ ವಿಚಾರಣೆ ವೇಳೆ ಉಳಿದ ಆರೋಪಿಗಳ ಕುರಿತು ಮಹತ್ವದ ಸುಳಿವುಗಳು ಲಭಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಬಂಧನಗಳು ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಸಂತ್ರಸ್ತ ಸತ್ಯನಾರಾಯಣ ಅವರು ಶಿವಮೊಗ್ಗದಲ್ಲಿ ಚಿನ್ನಾಭರಣ ಮತ್ತು ಅಡಿಕೆ ವ್ಯಾಪಾರ ನಡೆಸುತ್ತಿರುವ ನಾಗರಾಜ್ ಎಂಬವರ ಬಳಿ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 23ರಂದು ನಾಗರಾಜ್ ಅವರು 1.15 ಕೋಟಿ ರೂ. ಹಣವಿದ್ದ ಎರಡು ಬ್ಯಾಗ್ಗಳನ್ನು ಸತ್ಯನಾರಾಯಣ ಅವರಿಗೆ ನೀಡಿ, ಅದನ್ನು ಮಂಗಳೂರಿಗೆ ಕೊಂಡೊಯ್ದು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್ವೊಂದರಲ್ಲಿ ತಂಗುವಂತೆ ಸೂಚಿಸಿದ್ದರು.
ನಾಗರಾಜ್ ಅವರ ಸೂಚನೆಯಂತೆ ಸತ್ಯನಾರಾಯಣ ಅವರು ಅಕ್ಟೋಬರ್ 27ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆಎಸ್ಸಾರ್ಟಿಸಿ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ಅಕ್ಟೋಬರ್ 28ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರಿಗೆ ತಲುಪಿದ್ದರು.
ಲಾಲ್ಬಾಗ್ ಸಮೀಪ ಬಸ್ಸಿನಿಂದ ಇಳಿದ ಅವರು ಉಪಾಹಾರಕ್ಕಾಗಿ ಹೋಟೆಲ್ಗೆ ತೆರಳುತ್ತಿದ್ದಾಗ, ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮಫ್ಲರ್ ಧರಿಸಿದ್ದ ನಾಲ್ವರು ಅಪರಿಚಿತರು ಅವರನ್ನು ಅಪಹರಿಸಿದ್ದರು.
ನಂತರ ಆರೋಪಿಗಳು ಸತ್ಯನಾರಾಯಣ ಅವರನ್ನು ನಗರದ ವಿವಿಧೆಡೆ ಸುತ್ತಾಡಿಸಿ, ಅವರ ಬಳಿಯಿದ್ದ 1.15 ಕೋಟಿ ರೂ. ಹಣವನ್ನು ದೋಚಿಕೊಂಡು ಕಾವೂರು ಸಮೀಪ ಇಳಿಸಿ ಪರಾರಿಯಾಗಿದ್ದರು.
ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.