ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ದುರಂತ: ಕಾರ್ಮಿಕ ಮುರುಗನ್ ಮೃತ್ಯು
RB NEWS
Bureau Report
ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ದುರಂತ: ಕಾರ್ಮಿಕ ಮುರುಗನ್ ಮೃತ್ಯು
ಮಂಗಳೂರು ಮೀನುಗಾರಿಕೆ ಧಕ್ಕೆಯಲ್ಲಿ ಲೈಟ್ ಕಂಬ ಬಿದ್ದ ಪರಿಣಾಮವಾಗಿ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಅವರು ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಘಟನೆಯ ನಂತರ ಮೃತದೇಹವನ್ನು ಮಂಗಳೂರು ನಗರದ Wenlock District Hospitalಗೆ ಪೋಸ್ಟ್ ಮಾರ್ಟನ್ಗೆ ತರಲಾಗಿದ್ದು, ಈ ವೇಳೆ Democratic Youth Federation of India (DYFI) ಜಿಲ್ಲಾ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭ ಧಕ್ಕೆಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಸಂಬಂಧಿಕರೊಂದಿಗೆ ಮಾತನಾಡಲಾಯಿತು. ಮುರುಗನ್ ಅವರ ಸಾವಿನ ಸುದ್ದಿ ತಿಳಿದ ತಕ್ಷಣ ಬಹುತೇಕ ಕಾರ್ಮಿಕರು ಕೆಲಸ ನಿಲ್ಲಿಸಿ ವೆನ್ಲಾಕ್ ಆಸ್ಪತ್ರೆ ಸಮೀಪ ಜಮಾಯಿಸಿದರು. ಮೃತ ಮುರುಗನ್ ಅವರು ತಮಿಳುನಾಡಿನ Salem ಸಮೀಪದ ಜಿಲ್ಲೆಯ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮಂಗಳೂರು ಧಕ್ಕೆಯಲ್ಲಿ ತಲೆಹೊರುವ ಕಾರ್ಮಿಕನಾಗಿ ದುಡಿಯುತ್ತಿದ್ದರು. ಎಂದಿನಂತೆ ಮೀನು ಹೊತ್ತು ಬಂದು ಕುಳಿತಿದ್ದ ಸಂದರ್ಭದಲ್ಲೇ ಹಳೆಯ ಹಾಗೂ ತುಕ್ಕು ಹಿಡಿದ ಲೈಟ್ ಕಂಬ ಅಡಿಭಾಗದಿಂದ ಮುರಿದು ಬಿದ್ದಿದೆ. ಈ ವೇಳೆ ಸಮೀಪದಲ್ಲಿದ್ದ ಬಾಬು ಮತ್ತು ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮುರುಗನ್ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದ್ದಾರೆ. ಕುಟುಂಬದ ಏಕೈಕ ಆಧಾರವಾಗಿದ್ದ ಮುರುಗನ್ ಅವರ ನಿಧನದಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಘಟನೆಯ ನಂತರ ಕಾರ್ಮಿಕರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿ, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಧಕ್ಕೆಯಲ್ಲಿ ಹಳೆಯ ಹಾಗೂ ತುಕ್ಕು ಹಿಡಿದ ಲೈಟ್ ಕಂಬಗಳನ್ನು ಬದಲಾಯಿಸದೇ ನಿರ್ಲಕ್ಷ್ಯ ವಹಿಸಿರುವುದೇ ಈ ದುರಂತಕ್ಕೆ ಕಾರಣವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಅಪಾಯಕಾರಿ ಕಂಬಗಳು ಇನ್ನೂ ಧಕ್ಕೆಯಲ್ಲಿ ಇರುವುದಾಗಿ ಹೇಳಿ, ಅವುಗಳನ್ನು ತಕ್ಷಣ ತೆರವುಗೊಳಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು. ಧಕ್ಕೆಯ ಅವ್ಯವಸ್ಥೆಯನ್ನು ಸರಿಪಡಿಸಲು ಮಿನುಗಾರಿಕೆ ಇಲಾಖೆ ಹಾಗೂ ಸಂಬಂಧಿತ ಮೀನುಗಾರಿಕೆ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಪೋಸ್ಟ್ ಮಾರ್ಟನ್ ಬಳಿಕ ಮೃತದೇಹವನ್ನು ಆ್ಯಂಬುಲೇನ್ಸ್ ಮೂಲಕ ತಮಿಳುನಾಡಿನ ಕುಟುಂಬಕ್ಕೆ ಕಳುಹಿಸಲಾಗುವುದು ಎಂದು ಸಂಬಂಧಿಸಿದವರು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಹ ಕಾರ್ಯದರ್ಶಿ ತೈಯೂಬ್ ಬೆಂಗ್ರೆ ಹಾಗೂ ಮುಖಂಡರಾದ ಜಂಶೀರ್, ಅಸ್ಫಾನ್ ಉಪಸ್ಥಿತರಿದ್ದರು.