ಮಂಗಳೂರು: ಅಪ್ರಾಪ್ತನಿಗೆ ಲೈಂಗಿಕ ಕಿರುಕುಳ; ಚರ್ಚ್‌ನ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Picture of RB NEWS

RB NEWS

Bureau Report

ಚಿತ್ರಗಳು: ಎಐ


ಮಂಗಳೂರು, ಅ. 16: ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಸುದೀರ್ಘ ಕಾಲ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಚರ್ಚ್‌ನ ಫಾದರ್ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿಯನ್ನು ಫಾದರ್ ಸಿಪ್ರಿಯನ್ ಪಿಂಟೋ ಎಂದು ಗುರುತಿಸಲಾಗಿದೆ.

ಎಫ್‌ಐಆರ್ ಮಾಹಿತಿಯ ಪ್ರಕಾರ, ಪ್ರಾರ್ಥನೆಗಾಗಿ ಚರ್ಚ್‌ಗೆ ನಿಯಮಿತವಾಗಿ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಆಮಿಷ ಒಡ್ಡಿ, ಆತನನ್ನು ಪ್ರತ್ಯೇಕವಾಗಿ ಪ್ರಾರ್ಥನಾ ಕೊಠಡಿ ಹಾಗೂ ತಮ್ಮ ವಸತಿ ಕೊಠಡಿಗೆ ಕರೆಸಿಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

2026ರ ಆಗಸ್ಟ್ 14ರಂದು ಸಂಜೆ ಪ್ರಾರ್ಥನೆಯ ಸಮಯದಲ್ಲಿ ಧರ್ಮಗುರು ಬಾಲಕನಿಗೆ ಮತ್ತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಭಯಭೀತನಾದ ಬಾಲಕ ತನ್ನ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಾಗ, ಇತರ ಕೆಲವು ಬಾಲಕರಿಗೂ ಇದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಬಳಿಕ ಸಂತ್ರಸ್ತ ಬಾಲಕ ತನ್ನ ಕುಟುಂಬದ ಸದಸ್ಯರಿಗೆ ವಿಷಯ ತಿಳಿಸಿದ್ದು, ಪೋಷಕರು ಈ ವಿಚಾರವನ್ನು ಬಿಷಪ್ ಅವರ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರ ಸಲಹೆಯಂತೆ ಪೋಷಕರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಸಮಾಲೋಚನೆ ಪ್ರಕ್ರಿಯೆಯಿಂದಾಗಿ ದೂರು ನೀಡಲು ವಿಳಂಬವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.


ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top