[t4b-ticker]

ಮಂಗಳೂರಿನ ವ್ಯಕ್ತಿಯನ್ನು ಗುಂಪಿನಿಂದ ಥಳಿಸಿ ಹತ್ಯೆ: ಇಬ್ಬರು ಅಪ್ರಾಪ್ತರು ಸೇರಿ ಏಳು ಮಂದಿ ಬಂಧನ

Picture of RB NEWS

RB NEWS

Bureau Report

ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕಳ್ಳನೆಂದು ಶಂಕಿಸಿ ಮಂಗಳೂರಿನ ವ್ಯಕ್ತಿಯೊಬ್ಬರ ಮೇಲೆ ಗುಂಪಿನಿಂದ ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಯಸ್ಕರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು english.mathrubhumi.com ವರದಿ ಮಾಡಿದೆ.

ಜೂನ್ 9ರಂದು ಕುಲ್ತಾಲಿಯ ಸಂಕಿಜಹಾನ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಆದರೆ, ಘಟನೆಯ ವೀಡಿಯೊ ಕೆಲವು ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪ್ರಕರಣದ ಪ್ರಮುಖ ವಿವರಗಳು ಬಹಿರಂಗಗೊಂಡಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಮಂಗಳೂರು ನಿವಾಸಿ ಸಂದೀಪ್ ನಾಯಕ್‌ ಎಂದು ಗುರುತಿಸಲಾಗಿದೆ. ಆರಂಭಿಕ ವರದಿಗಳಲ್ಲಿ ಅವರನ್ನು ‘ಸಂದೀಪ್ ನಾಯ‌ರ್’ ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಅವರು ಕೇರಳದವರಾಗಿರಬಹುದು ಎಂದು ತನಿಖಾಧಿಕಾರಿಗಳು ಭಾವಿಸಿದ್ದರು. ಆದರೆ, ನಂತರದ ಪರಿಶೀಲನೆಯಲ್ಲಿ ಅವರ ಗುರುತು ಮಂಗಳೂರಿನ ಸಂದೀಪ್ ನಾಯಕ್ ಎಂಬುದಾಗಿ ದೃಢಪಟ್ಟಿದೆ.

ಪೊಲೀಸರ ಪ್ರಕಾರ, ಸಂದೀಪ್ ನಾಯಕ್ ಅವರು ಸುಮಾರು ಎರಡು ವಾರಗಳ ಹಿಂದೆ ಪರಿಚಯಸ್ಥರೊಂದಿಗೆ ಕುಲ್ತಾಲಿಗೆ ಬಂದಿದ್ದರು. ಜೂನ್ 9ರ ಬೆಳಿಗ್ಗೆ ಅವರು ಒಬ್ಬರೇ ಸ್ಥಳೀಯ ಮಾರುಕಟ್ಟೆಗೆ ತೆರಳಿದ್ದು, ಈ ವೇಳೆ ದಾರಿ ತಪ್ಪಿದ್ದರು ಎಂದು ತಿಳಿದುಬಂದಿದೆ.

ರಸ್ತೆ ಬದಿಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಕುಲ್ತಾಲಿ ಪೊಲೀಸ್‌ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿ ಜಯನಗರ-ಕುಲ್ತಾಲಿ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

ಆರಂಭದಲ್ಲಿ ಸಾವಿನ ಸಂದರ್ಭಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೊಗಳನ್ನು ಪರಿಶೀಲಿಸಿದ ಬಳಿಕ ಗುಂಪು ಹಲ್ಲೆಯ ಸಂಗತಿ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಯಸ್ಕರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಯಿಂದ ಉಂಟಾದ ಗಂಭೀರ ಗಾಯಗಳ ಪರಿಣಾಮ ಸಂದೀಪ್ ನಾಯಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪೂರ್ಣ ಹಿನ್ನೆಲೆ ಹಾಗೂ ಅವರೊಂದಿಗೆ ಕುಲ್ತಾಲಿಗೆ ಬಂದಿದ್ದ ಸ್ನೇಹಿತರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top