ಮಂಗಳೂರಿನ ರೈಲು ಆಡಳಿತಕ್ಕೆ ಹೊಸ ದಿಕ್ಕು: ಮೈಸೂರು ವಿಭಾಗದೊಂದಿಗೆ ಸೇರ್ಪಡೆಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ
RB NEWS
Bureau Report
ಮಂಗಳೂರಿನ ರೈಲು ಆಡಳಿತಕ್ಕೆ ಹೊಸ ದಿಕ್ಕು: ಮೈಸೂರು ವಿಭಾಗದೊಂದಿಗೆ ಸೇರ್ಪಡೆಗೆ ರೈಲ್ವೆ ಸಚಿವಾಲಯ ಹಸಿರು ನಿಶಾನೆ
ಮಂಗಳೂರು, ಆ. 21: ಮಂಗಳೂರು ಭಾಗದ ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದಿಂದ ಪ್ರತ್ಯೇಕಿಸಿ, ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಕುರಿತು ಶೀಘ್ರದಲ್ಲೇ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದ್ದು, ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಹುಕಾಲದ ರೈಲ್ವೆ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಂಗಳೂರು ಭಾಗದ ರೈಲ್ವೆ ಜಾಲ ಇದುವರೆಗೆ ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ಮತ್ತು ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಹಂಚಿಕೊಂಡಿತ್ತು. ಒಂದೇ ಪ್ರದೇಶದ ರೈಲು ಜಾಲವು ಎರಡು ವಿಭಿನ್ನ ವಿಭಾಗಗಳ ಆಡಳಿತ ವ್ಯಾಪ್ತಿಯಲ್ಲಿ ಇರುವುದರಿಂದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಹಾಗೂ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಮಂಗಳೂರು ಭಾಗದ ಸಂಪೂರ್ಣ ರೈಲ್ವೆ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಇದೀಗ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರ ಕೈಗೊಂಡಿರುವುದು ಮಹತ್ವದ ಬೆಳವಣಿಗೆ ಎಂದು ಕ್ಯಾ. ಚೌಟ ಹೇಳಿದ್ದಾರೆ. 2024ರಲ್ಲಿ ಸಂಸದನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಸಮಸ್ಯೆಯ ಪರಿಹಾರಕ್ಕೆ ಆದ್ಯತೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ವಿಷಯವನ್ನು ತಂದು, ಸಂಸದೀಯ ಹಾಗೂ ವಿವಿಧ ಸಾಂಸ್ಥಿಕ ವೇದಿಕೆಗಳಲ್ಲಿ ನಿರಂತರವಾಗಿ ಬೇಡಿಕೆ ಮಂಡಿಸಲಾಗಿತ್ತು. ರೈಲ್ವೆ ರಾಜ್ಯ ಸಚಿವರಾಗಿದ್ದ ವಿ. ಸೋಮಣ್ಣ ಅವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಈ ಕುರಿತು ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಯ ಗಂಭೀರತೆಯನ್ನು ವಿವರಿಸಲಾಗಿತ್ತು. ಲೋಕಸಭೆಯಲ್ಲಿಯೂ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ರೈಲ್ವೆ ಸಚಿವಾಲಯ ಮತ್ತು ಇಲಾಖೆಗಳೊಂದಿಗೆ ನಡೆಸಿದ ನಿರಂತರ ಪ್ರಯತ್ನ ಹಾಗೂ ಫಾಲೋಅಪ್ಗೆ ಇದೀಗ ಫಲ ಸಿಕ್ಕಿದೆ ಎಂದು ಸಂಸದರು ತಿಳಿಸಿದ್ದಾರೆ. ಆಡಳಿತಾತ್ಮಕ ಗೊಂದಲ ನಿವಾರಣೆಗೆ ನಿರೀಕ್ಷೆ ಮಂಗಳೂರು ರೈಲ್ವೆ ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆಯಾದ ಬಳಿಕ ಆಡಳಿತಾತ್ಮಕ ಗೊಂದಲಗಳು ಕಡಿಮೆಯಾಗುವ ನಿರೀಕ್ಷೆಯಿದೆ. ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವುದರ ಜೊತೆಗೆ ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಲಿದೆ. ಪ್ರಯಾಣಿಕರ ಕುಂದುಕೊರತೆಗಳ ವಿಲೇವಾರಿ ಹಾಗೂ ರೈಲ್ವೆ ಸೇವೆಗಳ ಸುಧಾರಣೆಯಲ್ಲೂ ವೇಗ ಹೆಚ್ಚುವ ಸಾಧ್ಯತೆಯಿದೆ. ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ವಿಸ್ತರಣೆ, ಸಂಪರ್ಕ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೇವೆಗಳಿಗೆ ಈ ಬದಲಾವಣೆ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.