ಮಂಗಗಳ ಉಪಟಳ: ಹೈರಾಣಾದ ಕೃಷಿಕ

Picture of RB NEWS

RB NEWS

Bureau Report

ಮಂಗಗಳ ಹಾವಳಿಯನ್ನು ತಡೆಗಟ್ಟಲಾಗದೆ ಹೈರಾಣರಾಗುತ್ತಾರೆ ಕೃಷಿಕರು. ಕೆಲವು ಪ್ರಾಣಿಗಳು ಬಂದವೆಂದರೆ ಅವುಗಳನ್ನು ಓಡಿಸಬಹುದು. ಆದರೆ ಮಂಗಗಳ ಹಾವಳಿ ಹಾಗಲ್ಲ. ಮರದಿಂದ ಮರಕ್ಕೆ ಹಾರುತ್ತಾ ರೈತರ ಎಲ್ಲಾ ಉಪಾಯಗಳಿಗೂ ಸಡ್ಡು ಹೊಡೆದು ಬೆಳೆನಾಶ ಮಾಡುತ್ತವೆ. ಮಂಗಗಳು ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಎಲ್ಲಾ ಪ್ರದೇಶಗಳಲ್ಲೂ ರೈತರಿಗೆ ತಲೆನೋವು. ಮನೆ ಹಿತ್ತಲಲ್ಲಿ ಬೆಳೆಯುವ ತರಕಾರಿ ಬಿಡಿ, ಹೋದರೆ ಹೋಗಲಿ ಎಂದು ಸುಮ್ಮನಾಗಬಹುದು. ಆದರೆ ಅವು ರೈತರ ಆದಾಯದ ಮೂಲವನ್ನೇ ನಾಶ ಮಾಡುತ್ತವೆ. ಇತರ ಪ್ರಾಣಿಗಳಿಗೂ ಇಲ್ಲದಂತೆ ಬೋಳಿಸಿಬಿಡುತ್ತವೆ.

ತೆಂಗು ಬೆಳೆದ ರೈತ ಅದರ ತುದಿಯಷ್ಟೇ ನೋಡಬೇಕು ವಿನಃ ಫಸಲನ್ನಲ್ಲ. ಪ್ರತಿದಿನ ಎಳೆಕಾಯಿ(ಬೊಂಡ/ಎಳನೀರು)ಗಳನ್ನು ತಿನ್ನುವುದಷ್ಟೇ ಅಲ್ಲ. ಹಾಳುಗೆಡವುತ್ತವೆ. ಅರಳಿದ ಹೊಂಬಾಳೆ ಮೇಲೆ ಹಾರಾಡಿ ಮುಂದಿನ ಹೂ, ಮಿಡಿಗಾಯಿಗಳಿಗೆ ಹಾನಿ ಮಾಡುತ್ತವೆ. ಮಂಗಗಳ ಉಪಟಳ ಸಹಿಸಿಯೂ ಉಳಿದುಕೊಂಡ ಕಾಯಿಗಳನ್ನು ಕೊಯ್ಲು ಮಾಡಿಸಿದರೆ ತೆಂಗಿನ ಮರವೇರಿದವರ ಮಜೂರಿಗೂ ಸಾಕಾಗುವುದಿಲ್ಲ. ಹಾಗೆ ಬಿಟ್ಟು ಒಣಗಿದ ಮೇಲೆ ಬಿದ್ದ ಕಾಯಿಗಳನ್ನು ಹೆಕ್ಕಿಕೊಂಡರಾಯಿತೆoದು ಸುಮ್ಮನಾದರೆ ಅಲ್ಲಿಯೂ ಅದಕ್ಕೆ ಪಾಲುದಾರರು. ಕಾಡುಹಂದಿ, ಮುಳ್ಳುಹಂದಿ, ಹೆಗ್ಗಣ ಅದಕ್ಕಾಗಿ ಕಾಯುತ್ತಿರುತ್ತವೆ. ಇಷ್ಟೆಲ್ಲಾ ಆದ ಮೇಲೆ ಕಾಯಿ ಉಳಿದರೆ ತೆಂಗು ಬೆಳೆದಾತನ ಪುಣ್ಯ. ಇಲ್ಲವಾದರೆ ತೆಂಗಿನ ಮರ ಮಾತ್ರ ಆತನ ಆಸ್ತಿ. ಫಲ ನಾಸ್ತಿ.

ಮಂಗಗಳ ಉಪದ್ರವ ತೆಂಗಿನ ಮರಕ್ಕಷ್ಟೇ ಅಲ್ಲ. ಬಾಳೆಗೊನೆ ಗೋಣಿಯಲ್ಲಿ ತುರುಕಿ ಮುಚ್ಚಿಟ್ಟರೂ ಬಿಚ್ಚದೆ ತಿನ್ನವುದು ಕರಗತವಾಗಿದೆ. ಕೊಕ್ಕೋ ಹಣ್ಣಾಗುವುದಕ್ಕೂ ಕಾಯುವಷ್ಟು ಪರುಷೊತ್ತು ಇಲ್ಲ. ಹೀಗಾದರೆ ರೈತ ಬಿತ್ತಿ ಬೆಳೆಯುವದೇನು? ಆತನ ಅಭಿವೃದ್ಧಿಯಾದರೂ ಹೇಗೆ?

ಕೇಂದ್ರ ಹಾಗೂ ರಾಜ್ಯ ಎರಡೂ ಸರಕಾರಗಳು ರೈತರಿಗೆ ಕಾಡು ಪ್ರಾಣಿಗಳಿಂದಾಗುವ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಕಾಡು ಪ್ರಾಣಿಗಳಿಗೂ ಬದುಕು ಬೇಕು. ಅದನ್ನು ಯಾವ ರೈತನೂ ನಿರಾಕರಿಸಲಾರ. ಆದರೆ ಆಹಾರ ಉತ್ಪಾದನೆಯ ಮೂಲಕ್ಕೆ ಕೈ ಹಾಕಿದರೆ ರೈತ ಮಾಡುವುದಾದರೂ ಏನು?

ಕಾಡು ಪ್ರಾಣಿಗಳು ದಾಳಿಯಿಡುವ ಪ್ರದೇಶದಲ್ಲಿ ರೈತ ಬೆಳೆದ ಉತ್ಪನ್ನಗಳ ಹಾನಿಯಾದ ಲೆಕ್ಕ ಮಾಡಿ ಆಯಾ ಬೆಳೆಗಳಿಗೆ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ನೀಡುವಂತಾಗಬೇಕು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top