ಬೆಂಗಳೂರು: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಭೂಗತ ಪಾತಕಿ ಬನ್ನಂಜೆ ರಾಜನಿಗೆ ಅವರ ತಂದೆ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮತ್ತು ಅನಂತರದ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಮಂಗಳವಾರ 15 ದಿನಗಳ ಷರತ್ತು ಬದ್ಧ ಪೆರೋಲ್ ಮಂಜೂರು ಮಾಡಿದೆ.
ಬನ್ನಂಜೆ ರಾಜನ ತಂದೆ 86 ವರ್ಷದ ಮಲ್ಪೆಯ ಬಾಪುತೋಟದ ಸುಂದರ ಶೆಟ್ಟಿಗಾರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆಯಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು.
ರಾಜನಿಗೆ ನಾಲ್ವರು ಪೊಲೀಸರು ಮತ್ತು ವಾಹನ ಒಳಗೊಂಡ ಎಸ್ಕಾರ್ಟ್ ಕಲ್ಪಿಸಲಾಗಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಆತನೇ ಪಾವತಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ರಾಜ್ಯ ಸರಕಾರ ಪ್ರತಿನಿಧಿಸಿದ್ದ ವಕೀಲ ರಾಹುಲ್ ಕಾರ್ಯಪ್ಪ ಅವರು ಕೋಕಾ ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣಗಳೂ ಸೇರಿದಂತೆ ಬನ್ನಂಜೆ ರಾಜನ ವಿರುದ್ಧ 23 ಪ್ರಕರಣಗಳು ಬಾಕಿ ಇವೆ. ಹಲವು ಪ್ರಕರಣಗಳಲ್ಲಿ ರಾಜ ದೋಷಿ ಎಂದು ಸಾಬೀತಾಗಿದ್ದು, ಉದ್ಯಮಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಬನ್ನಂಜೆ ರಾಜ ಪರ ವಕೀಲ ಸಿರಾಜುದ್ದೀನ್ ಅಹ್ಮದ್ ಅವರು, 24 ತಾಸಿಗೆ ಮೂವರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುತ್ತಾರೆ. ಇದು ನಮ್ಮ ಮಿತಿಗಿಂತ ಹೆಚ್ಚಿನ ವೆಚ್ಚವಾಗುತ್ತದೆ. ಇದಕ್ಕೆ 50 ಸಾವಿರ ಅಥವಾ ಒಂದು ಲಕ್ಷ ರೂ. ಪಾವತಿಸುತ್ತೇನೆ. ಬನ್ನಂಜೆ ರಾಜ ಅವರು 15 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ ಎಂದರು.
ಆಗ ಪೀಠವು ಸರಕಾರದ ನಿಯಮದ ಪರ ಎಸ್ಕಾರ್ಟ್ಗೆ ಹಣ ಪಾವತಿಸಲೇಬೇಕು. ನಿಮ್ಮ ಇತಿಹಾಸವೇ ಹಾಗಿದೆ. ಏನೂ ಮಾಡಲಾಗದು ಎಂದು ಮೌಖೀಕವಾಗಿ ಹೇಳಿತು





































