ಭಾರತೀಯ ಅಂಚೆ ಇಲಾಖೆಗೆ ಸುಮಾರು 170 ವರ್ಷಗಳ ಇತಿಹಾಸ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಹಾಗೂ ಕರುಣಾಳು ಬಾ ಬೆಳಕು ಪ್ರತಿಷ್ಠಾನ (ರಿ.) ಕಾರ್ಕಳ ಇವುಗಳ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಮತ್ತು ಪ್ರಧಾನ ಮಂತ್ರಿ ಜನಸೇವಾ ಸೌಲಭ್ಯಗಳ ಅಭಿಯಾನವು ಸಮಾಜ ಮಂದಿರದಲ್ಲಿ ಶುಕ್ರವಾರ ನಡೆಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡುಬಿದಿರೆ ಇದರ ಅಧ್ಯಕ್ಷ ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಅಂಚೆ ಇಲಾಖೆಗೆ ಸುಮಾರು 170 ವರ್ಷಗಳ ಇತಿಹಾಸವಿದ್ದು ಭ್ರಷ್ಟಚಾರ ರಹಿತವಾಗಿ ಕೆಲಸ ಮಾಡುತ್ತಾ ಬಂದಿದೆ. ಕೇಂದ್ರ ಸರಕಾರದ ಜನಪರವಾದ ವಿವಿಧ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವ ಈ ಇಲಾಖೆಯ ಜತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಪವರ್ ಫ್ರೆಂಡ್ಸ್ ಎಂಬ ಸಂಸ್ಥೆಯು ಇದರ ಜತೆಗೆ ಕೈ ಜೋಡಿಸಿಕೊಂಡಿದೆ. ಆರೋಗ್ಯ ಶಿಬಿರ, ರಕ್ತದಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವುದಲ್ಲದೆ ಇಲಾಖೆಯಿಂದ ಜನಸಾಮಾನ್ಯರಿಗೆ ಸಿಗುವ ಯೋಜನೆಗಳ ಬಗ್ಗೆ ತಮ್ಮ ಸುತ್ತಮುತ್ತ ಇರುವ ಜನರಿಗೆ ತಿಳಿಸಿಕೊಡುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.


ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಬಿ.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಜನರೊಂದಿಗೆ ಸಂಪರ್ಕವನ್ನು ಬೆಸೆಯಲೆಂದು ಆರಂಭಗೊಂಡಿರುವ ಅಂಚೆ ಇಲಾಖೆಯು ಇದೀಗ ಹಲವಾರು ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಆಧುನಿಕ ತಂತ್ರಜ್ಞಾನಗಳ ಭರಾಟೆಯಲ್ಲಿ ಖಾಸಗಿ ಪತ್ರ ವ್ಯವಹಾರಗಳು ನಡೆಯದೆ ಇದ್ದರೂ ಬ್ಯಾಂಕ್, ಕೋಟ್ ೯ ಕಛೇರಿಗಳ ಪತ್ರವ್ಯವಹಾರಗಳು ಈಗಲೂ ನಡೆಯುತ್ತಿವೆ.
ಕೇಂದ್ರ ಸರಕಾರದ ವಿವಿಧ ಯೋಜನೆಗಳು ಅಂಚೆ ಇಲಾಖೆಯ ಮೂಲಕವೇ ನಡೆಯುತ್ತಿದೆ. ಹಿರಿಯ ನಾಗರಿಕರಿಗೆ ಖಾತೆ, ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಬಿಬಿಎಂ ಖಾತೆ ಸಹಿತ ಇತರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಮುಂದಿದೆ ಎಂದರು.
ನ್ಯಾಯವಾದಿ, ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಂಗಳೂರು ವಿಭಾಗದ ಪರ್ಯಾವರಣ ಸಂರಕ್ಷಣಾ ಗತಿನಿಧಿ ಸಹಸಂಯೋಜಕ ಮಂಜುನಾಥ, ಪುತ್ತೂರು ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ್, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್, ಕರುಣಾಳು ಬಾ ಬೆಳಕು ಪ್ರತಿಷ್ಠಾನ (ರಿ) ಕಾರ್ಕಳ ಇದರ ಅಧ್ಯಕ್ಷೆ ರಮಿತಾ ಶೈಲೇಂದ್ರ, ಮೂಡುಬಿದಿರೆಯ ಅಂಚೆ ಪಾಲಕಿ ಉಷಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪವರ್ ಫ್ರೆಂಡ್ಸ್ ನ ಗೌರವ ಸಲಹೆಗಾರ, ನ್ಯಾಯವಾದಿ ಜಯಪ್ರಕಾಶ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಮೆನೇಜರ್ ಗುರುಪ್ರಸಾದ್ ವಂದಿಸಿದರು.ಏಳು ನೂರಕ್ಕೂ ಹೆಚ್ಚು ಮಂದಿ ಯೋಜನೆಗಳ ಫಲಾನುಭವಿಗಳು
ಮೂಡುಬಿದಿರೆ : ಸ್ಥಳೀಯ ಪವರ್ ಫ್ರೆಂಡ್ಸ್ ಬೆದ್ರ, ಕಾರ್ಕಳದ ಕರುಣಾಳು ಬಾ ಬೆಳಕು ಪ್ರತಿಷ್ಠಾನ ಇವರ ನೇತೃತ್ವದಲ್ಲಿ ಜುಲೈ 19ರಂದು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಒಂದು ದಿನ ಪರಿಯಂತ ನಡೆದ ಕಾರ್ಯಕ್ರಮದ ಫಲಾನುಭವಿಗಳಾಗಿ 7 ನೂರಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದುಕೊಂಡರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮತ್ತು ಪ್ರಧಾನಮಂತ್ರಿ ಜನ ಸೇವಾ ಸೌಲಭ್ಯಗಳ ಉಪಯೋಗ ದಲ್ಲಿ ಮುಖ್ಯವಾಗಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ 18 ಮಂದಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ 15 ಮಂದಿ, ಅಟಲ್ ಪಿಂಚಣಿ ಯೋಜನೆ 7 ಮಂದಿ, ಪ್ರಧಾನಮಂತ್ರಿ ಜನಶ್ರಮ ಶ್ರಮ ಯೋಗಿ ಮಾನ್ ಧನ್ 41 ಮಂದಿ, ಇ ಶ್ರಮ ಕಾರ್ಡ್ 63 ಮಂದಿ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 79 ಮಂದಿ, ಆಯುಷ್ಮಾನ್ ಭಾರತ್ 52 ಮಂದಿ, ಅಂಚೆ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ 55 ಮಂದಿ, ಪಾನ್ ಕಾರ್ಡ್ ಹೊಸತು ಮತ್ತು ತಿದ್ದುಪಡಿ 28 ಮಂದಿ, ವೋಟರ್ ಐಡಿ ಹೊಸತು ಮತ್ತು ತಿದ್ದುಪಡಿ 80 ಮಂದಿ, ಪಾಸ್ ಪೋರ್ಟ್ ಹೊಸತು ಮತ್ತು ರಿನಿವಲ್ 33 ಮಂದಿ, ಆರ್ ಟಿ ಸಿ ಮತ್ತು ಆಧಾರ್ ಲಿಂಕ್ 96 ಮಂದಿ, ಸಿ ಎಸ್ ಸಿ ಇತರ ಸೇವೆ 15 ಮಂದಿ, ಅಂಚೆ ಸಣ್ಣ ಉಳಿತಾಯ ಖಾತೆ 28 ಮಂದಿ, ಸುಕನ್ಯಾ ಸಮೃದ್ಧಿ ಖಾತೆ 11 ಮಂದಿ, ಪಿಪಿಎಫ್ ಖಾತೆ 2 ಮಂದಿ, ಐ ಟಿ ಪಿ ಬಿ ಖಾತೆ 59 ಮಂದಿ, ಅಂಚೆ ಜೀವ ವಿಮೆ 17 ಮಂದಿ, ಆಧಾರ್ ನೋಂದಣಿ ತಿದ್ದುಪಡಿ 40 ಮಂದಿ ಹೀಗೆ ಒಟ್ಟು ಸುಮಾರು 730 ಮಂದಿ ಫಲಾನುಭವಿಗಳು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು ಎಂದು ಅಂಚೆ ಇಲಾಖೆಯ ಮಾರುಕಟ್ಟೆ ವ್ಯವಸ್ಥಾಪಕ ಗುರುಪ್ರಸಾದ್ ಅವರು ತಿಳಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ಕಂಪ್ಯೂಟರ್ ಸಹಾಯಕರಾಗಿ ಸಹಕರಿಸಿದ ಎಲ್ಲರಿಗೂ ಕೂಡ ಅವರು ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.
ವರದಿ : ರಾಯಿ ರಾಜಕುಮಾರ್ ಮೂಡುಬಿದಿರೆ





































