


ಬೋಳ ಸದಾಶಿವ ಶೆಟ್ಟಿ ವಜಾ ಆದೇಶ ರದ್ದು : ಹೈಕೋರ್ಟ್ ಆದೇಶ








ಕಾರ್ಕಳ, ಫೆ.14: ಬೋಳ ವ್ಯವಸಾಯ ಸಹಕಾರಿ ಸೇವಾ ಸಂಘದ ನಿರ್ದೇಶಕ ಸ್ಥಾನದಿಂದ ಬೋಳ ಸದಾಶಿವ ಶೆಟ್ಟಿಯವರನ್ನು ವಜಾಗೊಳಿಸಿದ್ದ ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಂಘದ ನಿರ್ದೇಶಕರಾದ ಮುರುಳೀಧರ ಶರ್ಮ, ಜಯರಾಮ ಸಾಲ್ಯಾನ್, ಪ್ರವೀಣ್ ಸಾಲ್ಯಾನ್, ಸೂರ್ಯಕಾಂತ ಶೆಟ್ಟಿ ಸೇರಿದಂತೆ ಇತರರು ಕುಂದಾಪುರ ಉಪವಿಭಾಗದ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದ್ದರು. ಈ ದೂರು ಆಧರಿಸಿ ವಿಚಾರಣೆ ನಡೆಸಿದ ಸಹಾಯಕ ನಿಬಂಧಕರು, ಸದಾಶಿವ ಶೆಟ್ಟಿಯವರು ಅವ್ಯವಹಾರ ನಡೆಸಿರುವುದು ಸಾಬೀತಾಗಿದೆ ಎಂದು ತಮ್ಮ ಆದೇಶದಲ್ಲಿ ಉಲ್ಲೇಖಿಸಿ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಬೋಳ ಸದಾಶಿವ ಶೆಟ್ಟಿಯವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನ್ಯಾಯಪೀಠ, ಪ್ರತಿವಾದಿಗಳು ಮಾಡಿರುವ ಆರೋಪಗಳಲ್ಲಿ ಸಮರ್ಪಕ ಸತ್ಯಾಂಶ ಕಾಣಿಸಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪರಿಣಾಮವಾಗಿ ಸಹಾಯಕ ನಿಬಂಧಕರು ಹೊರಡಿಸಿದ್ದ ವಜಾ ಆದೇಶವನ್ನು ರದ್ದುಪಡಿಸಿ, ಅರ್ಜಿದಾರ ಹಾಗೂ ಇತರ ಪ್ರತಿವಾದಿಗಳ ಮೇಲ್ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಉಡುಪಿ ಜಿಲ್ಲಾ ಉಪ ನಿಬಂಧಕರಿಗೆ ಸೂಚನೆ ನೀಡಿದೆ.
ಬೋಳ ಸದಾಶಿವ ಶೆಟ್ಟಿಯವರ ಪರವಾಗಿ ಹೈಕೋರ್ಟ್ನಲ್ಲಿ ವಕೀಲ ದೇವಿಪ್ರಸಾದ್ ಶೆಟ್ಟಿ ವಾದ ಮಂಡಿಸಿದರು.




































