ಬೈಲೂರು ಮಾರಿಯಮ್ಮನ ಸನ್ನಿಧಾನದಲ್ಲಿ ಪ್ರಮಾಣ ಮಾಡಲಿ: ಪರಶುರಾಮನ ವಿವಾದದಿಂದ ಹಿಂದೆ ಸರಿಯುವೆ-ಮುನಿಯಾಲು

ಕಾರ್ಕಳ : ಬೆಂಗಳೂರಿನಲ್ಲಿ ಪೊಲೀಸರು ಪತ್ತೆ ಹಚ್ಚಿದ ಪರಶುರಾಮನ ಕಂಚಿನ ಮೂರ್ತಿಯ ಬಿಡಿ ಭಾಗಗಳಿಂದಾಗಿ ಕಾರ್ಕಳದಲ್ಲಿ ನಿರ್ಮಿಸಿದ ಪರಶುರಾಮನ ಪ್ರತಿಮೆ ನಕಲಿ ಎಂಬುದು ಸಾಬೀತಾಗಿದೆ. ಚುನಾವಣೆಯ ದೃಷ್ಟಿಯಿಂದ ಜನರಿಗೆ ಈ ರೀತಿಯಲ್ಲಿ ನಂಬಿಸಿ ವಂಚಿಸಿದ ಶಾಸಕ ಸುನಿಲ್ ಕುಮಾರ್ ತನ್ನ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ನಾಗರಿಕರಲ್ಲಿ ಕ್ಷಮೆಯಾಚಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿನಗಳ ಹಿಂದೆ ಬಿಜೆಪಿ ನಾಯಕರು ಉಡುಪಿ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿ ಪತ್ರವೂ ಜನರ ದಿಕ್ಕು ತಪ್ಪಿಸುವ ಪ್ರಯತ್ನವಾಗಿದೆ ಎಂದರು.
ಕಾಂಗ್ರೆಸ್ ನಾಯಕ ಮುನಿಯಲು ಉದಯಕುಮಾರ್ ಶೆಟ್ಟಿ ಅವರ ಬಗ್ಗೆ ಅನಗತ್ಯವಾಗಿ ನಿಂದನೆ ಮಾಡಿರುವುದು ಖಂಡನೀಯವಾಗಿದೆ.

ಪರಶುರಾಮನ ಶಾಪವು ಬಿಜೆಪಿಯವರಿಗೆ ತಟ್ಟಿದೆ. ಮೊದಲ ಹಂತದಲ್ಲಿಯೇ ಅದು ದೃಡಪಟ್ಟಿದ್ದು, ಇದರಿಂದ ವಿಚಲಿತಗೊಂಡ ಬಿಜೆಪಿ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಅಲ್ಲದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶುಭದರಾವ್ ಆರೋಪಿಸಿದರು.
ಸುನಿಲ್ ಕುಮಾರ್ ಅವರ ವಿಕಾಸ ಕಚೇರಿಯ ನಿರ್ಮಾಣ ಹಂತದಲ್ಲಿ ಬಳಸಲಾಗಿದ್ದ ನೋಟ್ ಫೋರ್ ಸೇಲ್ ಸಿಮೆಂಟ್ ಹಗರಣವನ್ನು ಬಿಜೆಪಿಯಿಂದಲೇ ಬಹಿರಂಗಗೊಂಡಿತು. ಇದರ ಹಿನ್ನೆಲೆಯಲ್ಲಿ ಬಿಜೆಪಿಯ ಕ್ಷೇತ್ರ ಅಧ್ಯಕ್ಷರಾಗಿದ್ದ ಮಹಾವೀರ ಹೆಗ್ಡೆ ಅವರ ಫೋನ್ ಕರೆ ಕದ್ದಾಲಿಕೆಯಾಗಿ, ಪಕ್ಷದ ಕಚೇರಿಯಲ್ಲಿ ಅವರನ್ನು ದೂರ ಮಾಡಲಾಗಿತ್ತು ಎಂಬುದು ಮರೆಯಲಾಗದ ರಾಜಕೀಯ ವಿಚಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ಬಹಿರಂಗ ಪಡಿಸಿದರು.
ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷನಾಗಿ ಮುಂದುವರಿಯಲು ಅನರ್ಹ. ಪರಶುರಾಮನ ಮೂರ್ತಿಯ ಮೇಲ್ಭಾಗ ಕೊಂಡುಹೊಯ್ಯಲಾದ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣವು ಸೋರಿಕೆ ಮಾಡಿರುವುದು ಬಿಜೆಪಿಯವರೇ ಆಗಿದ್ದಾರೆ. ಯಾರು ಎಂಬುದು ಇದುವರೆಗೆ ಅವರಿಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಸವಾಲೆಸೆದರು.

ಪರಶುರಾಮನನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನಂಬಿಕೆ ಇರಿಸಿಕೊಂಡವರು ನಾವು. ಆದರೆ ಬಿಜೆಪಿಯವರು ಪರಶುರಾಮನ ಹೆಸರಿನಲ್ಲಿ ಜನರಿಗೆ ಮೋಸ ಮಾಡಿ ನಕಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಶೋಭೆಯಲ್ಲ ಪರಶುರಾಮನ ಶಾಪ ಅವರಿಗೆ ತಟ್ಟಲಿದೆ.
ಪರಶುರಾಮನ ಕಂಚಿನ ಮೂರ್ತಿ ಅಸಲಿ ಆಗಿದ್ದರೆ ಸುನೀಲ್ ಕುಮಾರ್ ಹಾಗೂ ಅವರ ಪರವಾಗಿರುವವರು ಬೈಲೂರಿನ ಮಾರಿಯಮ್ಮ ಗುಡಿಗೆ ಬಂದು ಪ್ರಮಾಣ ಮಾಡಲಿ. ಪ್ರಮಾಣ ಮಾಡಿದ್ದೇ ಅದಲ್ಲಿ ನಾವು ಪರಶುರಾಮನ ವಿಚಾರದಲ್ಲಿ ಯಾವುದೇ ತರದಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.
ಧಾರ್ಮಿಕ, ಸಾಮಾಜಿಕ, ವ್ಯವಸ್ಥೆಗೆ ಕುಂದು ತಂದಿಲ್ಲ: ಮುನಿಯಾಲು ಉದಯಕುಮಾರ್ ಶೆಟ್ಟಿ
ಧಾರ್ಮಿಕ ಸಾಮಾಜಿಕ ವ್ಯವಸ್ಥೆಯನ್ನು ಒಡೆಯುವ ಕೆಲಸ ನಾವು ಮಾಡಿಲ್ಲ . ಹೆಬ್ರಿಯ ಸುಚೇತ ಕೊಲೆ ಪ್ರಕರಣವನ್ನೇ ಮುಂದಿಟ್ಟುಕೊಂಡು ರಾಜಕೀಯ ರಂಗ ಪ್ರವೇಶಿಸಿದ ಸುನಿಲ್ ಕುಮಾರ್ ಅವರು 20 ವರ್ಷ ಕಳೆದರೂ ಇನ್ನೂ ಕೂಡ ಸುಚೇತ ನಿಗೂಢ ಸಾವಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟು ಅಂದಿನ ಶಾಸಕ ಗೋಪಾಲ ಭಂಡಾರಿ ಅವರ ಮನೆ ಮಂದಿಯನ್ನು ಆರೋಪ ಸ್ಥಾನದಲ್ಲಿ ನಿಲ್ಲಿಸಿರುವುದು ಹಾಗೂ ತೇಜೋವಧೆ ಮಾಡಿರುವುದು ಕ್ಷೇತ್ರದ ಜನತೆ ಮರೆತಿಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ನೇರ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರು ಕಾನೂನು ರೀತಿಯಲ್ಲಿ ಪರಶುರಾಮನ ಕಂಚಿನ ವಿಗ್ರಹವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಶಿಲ್ಪಿ ಕೃಷ್ಣನಾಯಕ್ ಅವರು ಜನರ ಭಾವನೆಯನ್ನು ಕೆರಳಿಸುವ ಉದ್ದೇಶದಿಂದ ಜಾತಿ ಮತ್ತು ಧರ್ಮವನ್ನು ಎಳೆದು ತಂದಿದ್ದಾರೆ. ಕೃಷ್ಣ ನಾಯಕರ ಹೇಳಿಕೆ ಹಿಂದೆ ರಾಜಕೀಯ ದುರುದ್ದೇಶವಿದೆ. ನಮ್ಮದು ಅಂತಹ ಪ್ರವೃತ್ತಿ ಇಲ್ಲ. ಸಿಮೆಂಟ್ ಹಗರಣದಲ್ಲಿ ಮಹಾವೀರ ಹೆಗ್ಡೆಯವರೇ ಸುನಿಲ್ ಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಹೇಳಿದ್ದರು . ಇಂದು ಅದೇ ಮಹಾವೀರ ನನ್ನ ಉಡುಪುಗಳ ಬಗ್ಗೆ ಸಾರ್ವಜನಿಕ ಸಭೆಯಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ. ಇನ್ನು ಮುಂದೆ ಯಾವುದೇ ಉಡುಪುಗಳನ್ನು ಧರಿಸಬೇಕಾದರೆ ನಾನು ಮಹಾವೀರ ಹೆಗ್ಡೆಯ ಅನುಮತಿ ಪಡೆಯಬೇಕೆ ಎಂದು ಪ್ರಶ್ನಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಸುನಿಲ್ ಕುಮಾರ್ ಅವರಿಗೆ ರಾಜ್ಯದಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಸಿಗಲಾರದು.
ಈ ನಿಟ್ಟಿನಲ್ಲಿ ವಿಚಲಿತಗೊಂಡಿರುವ ಅವರು ಹೇಗಾದರೂ ಮಾಡಿ ಪರಶುರಾಮನ ವಿವಾದವನ್ನು ಮುಕ್ತಿಗೊಳಿಸುವಂತೆ ಸಿಕ್ಕಸಿಕ್ಕವರಲ್ಲಿ ಅಂಗಲಾಚುತ್ತಿರುವುದು ಕಾಣಬಹುದು.
ಸುನಿಲ್ ಕುಮಾರರವರ ಈ ಕಪಟ ನಾಟಕವು ಸನಾತನ ಹಿಂದೂ ಧರ್ಮವನ್ನು ತಲೆತಗ್ಗಿಸುವಂತೆ ಮಾಡಿದೆ. ಅಧಿಕಾರಕ್ಕಾಗಿ ಇವರು ಜಾತಿ, ಜಾತಿಯ ನಡುವೆ ವಿಷ ಬೀಜವನ್ನು ಬಿತ್ತುತ್ತಿದ್ದಾರೆ.
ಅವರೊಬ್ಬ ಪ್ರಮಾಣಿಕ ರಾಜಕರಣಿಯಾದರೆ ಬೈಲೂರಿನ ಮಾರಿಯಮ್ಮನ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಬೇಕು. ಈ ಹಿಂದೆ ನಿರ್ಮಿಸಲಾಗಿದ್ದ ಪರಶುರಾಮನ ವಿಗ್ರಹವು ಕಂಚಿನದೇ ಎಂದು ಪ್ರಮಾಣ ಮಾಡಲಿ ಎಂದರು. ಸವಾಲು ಸ್ವೀಕರಿಸಿದರೆ ಆ ವಿವಾದದ ಕಡೆ ನಾವು ಮುಖ ಮಾಡುವುದಿಲ್ಲ ಎಂದರು.
ಬಿಜೆಪಿಯವರಿಗೆ ಯೋಗ್ಯತೆ ಇದ್ದರೆ ನನ್ನ ಮನೆಯ ಮುಂದೆ ಬಂದು ಮುತ್ತಿಗೆ ಹಾಕಲಿ ಎಂದು ಸವಾಲು ಎಸೆದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಜಿತ್ ಕುಮಾರ್ ಮಾಳ, ಭೂ ನ್ಯಾಯ ಮಂಡಳಿಯ ಸದಸ್ಯ ತಾರಾನಾಥ ಕೋಟ್ಯಾನ್ ಮಿಯ್ಯಾರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿವೇಕಾನಂದ ಶೆಣೈ, ಹೆಬ್ರಿ ಯುವ ಕಾಂಗ್ರೆಸ್ ಮುಖಂಡ ದಿನೇಶ್ ಹೆಬ್ರಿ ಮತ್ತೆ ಮತ್ತೆ ಇತರರು ಉಪಸ್ಥಿತರಿದ್ದರು.






































