







ಬೇಕಾಬಿಟ್ಟಿ ಕಾಮಗಾರಿಗೆ ಯುವಕ ಬಲಿ; ಸ್ಥಳೀಯರಿಂದ ಆಕ್ರೋಶ : ಗರಿಷ್ಠ ಪರಿಹಾರಕ್ಕೆ ಮನವಿ
ಹೆಬ್ರಿ : ಇಲ್ಲಿಗೆ ಸಮೀಪದ ಶಿವಪುರ ಎಂಬಲ್ಲಿ ನಡೆಯುತ್ತಿರು ರಾಷ್ಟ್ರೀಯ ಹೆದ್ದಾರಿ 169 ಎ ಯ ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ಡಿಸೆಂಬರ್ 4ರಂದು ನಡೆದ ರಸ್ತೆ ಅಪಘಾತದಲ್ಲಿ ರಾಹುಲ್ ಎಂಬ ಯುವಕ ದಾರುಣ ರೀತಿಯಲ್ಲಿ ಅಂತ್ಯ ಕಂಡಿದ್ದು, ಘಟನಾ ಸ್ಥಳದಲ್ಲಿ ಸಮರ್ಪಕ ಸೂಚನ ಫಲಕ ಅಳವಡಿಸದೇ ಇರುವುದೇ ಘಟನೆಗೆ ಕಾರಣವಾಗಿದೆ ಎಂದು ಶಿವಪುರದಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್, ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ಇದಕ್ಕೆ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸಿ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಗರಿಷ್ಠ 50 ಲಕ್ಷ ಪರಿಹಾರ ಬೇಡಿಕೆ: ವಾಹನಗಳು ಓಡಾಡಲು ಸೂಕ್ತ ಬ್ಯಾರಿ ಕೇಡಿಲ್ಲದೆ, ಸೂಚನಾ ಫಲಕಗಳು ಅಪಘಾತದ ಸ್ಥಳದಲ್ಲಿ ಇರಲಿಲ್ಲ.
ಅಪಘಾತ ನಡೆಸಿದ ಕಾರು ವೇಗದಿಂದ ಬಂದು ಬೈಕಿಗೆ ಡಿಕ್ಕಿ ಹೊಡೆದಿರುತ್ತದೆ. ಗುತ್ತಿಗೆದಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ನಮ್ಮ ಮನೆ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಗರಿಷ್ಠ 50 ಲಕ್ಷ ರೂಪಾಯಿಯ ಪರಿಹಾರ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಲಾಗುವುದೆಂದು ಮೃತ ರಾಹುಲ್ ಅವರ ಮಾವ ಶ್ರೀಧರ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಶವ ಬರುವಾಗ ಬ್ಯಾರಿಕೆಡ್ ಇಟ್ಟರು: ಸಂಘ ಪರಿವಾರದ ಸಕ್ರಿಯಾ ಕಾರ್ಯಕರ್ತನಾಗಿದ್ದ ರಾಹುಲ್ ನ ಶವವನ್ನು ಶಿವಪುರ ಪೇಟೆಯಲ್ಲಿ ಅಂತಿಮಯಾತ್ರೆ ಮಾಡುತ್ತಿರುವ ಮಾಹಿತಿ ಹೊರಬೀಳುತ್ತಿದ್ದಂತೆ ಬ್ಯಾರಿಕೆಡ್ ಹಾಕುವ ವ್ಯವಸ್ಥೆ ಮಾಡಿದ್ದಾರೆ. ಮೊದಲೇ ಈ ರೀತಿಯ ಸೂಚನಾ ಫಲಕ ಅಥವಾ ಬ್ಯಾರಿಕೆಟ್ ಬಳಸಿದ್ದರೆ ಯುವಕನೊಬ್ಬ ಜೀವ ಉಳಿದು ಮನೆಮಂದಿಗೆ ಆಸರೆಯಾಗುತ್ತಿದ್ದನೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಮಾತನಾಡಿ, ಇಲ್ಲಿ ನಿರಂತರವಾಗಿ ಕಾಮಗಾರಿ ನಡೆಯುವಾಗ ನಿಯಮದ ಉಲ್ಲಂಘನೆ ಮಾಡಲಾಗಿದೆ. ಯಾವುದೇ ಸಮರ್ಪಕವಾದ ಸೂಚನ ಫಲಕಗಳಿಲ್ಲದೆ ಅನೇಕ ಅಪಘಾತಗಳು ನಡೆದಿದೆ. ಪ್ರತಿಫಲನಾ ಸೂಚನಾ ಫಲಕ ಅಗತ್ಯವಿದೆ.
ರಾಹುಲ್ ಅವರ ಮನೆಮಂದಿ ಸಂಕಷ್ಟದಲ್ಲಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಹಿರಿಯ ಮಗನನ್ನು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ಸ್ಥಳೀಯರಾದ ಶ್ರೀನಿವಾಸ್, ಇಂದಿರಾ, ಬಾಬು ಶೆಟ್ಟಿ, ಗುರು ಬಡಿಕಿಲಾಯ, ಶ್ರೀಧರ ಶೆಟ್ಟಿ, ಶೀನ ಇನ್ನಿತರ ಊರಿನ ಮುಖಂಡರು ಜೊತೆಗಿದ್ದರು.








































