ಬೆಂಗಳೂರಿನಲ್ಲಿ ಯುವತಿಗೆ ಕಿರುಕುಳ: ಕೇರಳದ ಹಳ್ಳಿಯಲ್ಲಿ ಅವಿತ್ತಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು!
ಬೆಂಗಳೂರು: ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಹಿಂದಿನಿದ ಬಂದು ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದು ಸುಮಾರು 10 ದಿನಗಳ ಬಳಿಕ ಇದೀಗ ಆರೋಪಿ ಸಂತೋಷ್ ಡೆನಿಯಲ್(26)ನನ್ನು ಕೇರಳದ ಕೋಝಿಕ್ಕೋಡ್ ನಡವನ್ನೂರು ಗ್ರಾಮದಿಂದ ಬಂಧಿಸಲಾಗಿದೆ.

ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾದ ನಂತರ ಘಟನೆಯ ಬಗ್ಗೆ ಸಾರ್ವಜನಿಕರು ಭಾರೀ ಆಕ್ರೋಶ ಹೊರಹಾಕಿದರು. ಬಳಿಕ ಆರೋಪಿಯ ಪತ್ತೆಗೆ ಪೊಲೀಸರು 10 ದಿನಗಳ ಕಾಲ ಶೋಧ ನಡೆಸಿದ್ದು, ಇದೀಗ ಕಾಮುಕ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಏ. 3 ರಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಯುವತಿಯರ ಕಡೆಗೆ ಓಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಖಾಲಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಕೆಲವು ದ್ವಿಚಕ್ರ ವಾಹನಗಳು ನಿಂತಿದ್ದವು. ನಂತರ ಆರೋಪಿ ಇಬ್ಬರು ಯುವತಿಯರಲ್ಲಿ ಒಬ್ಬಳನ್ನು ಹಿಂದಿನಿಂದ ತಬ್ಬಿ ಹಿಡಿದು ಅನುಚಿತವಾಗಿ ವರ್ತಿಸಿ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದನು.
ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಚಲನವಲನ ಪತ್ತೆಗೆ 1,800ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆರೋಪಿ ಪತ್ತೆಗಾಗಿ ಡಿಸಿಪಿ ಸಾರಾ ಫಾತೀಮಾ 2 ತಂಡ ರಚಿಸಿದ್ದರು.
ಕಾರ್ ಶೋರೂಂನಲ್ಲಿ ಚಾಲಕನಾಗಿರುವ ಆರೋಪಿ
ಕೇರಳದಲ್ಲಿ ಸಿಕ್ಕ ಆರೋಪಿ ತಿಲಕ ನಗರದ ಗುಲ್ವರ್ಗ ಕಾಲೋನಿ ನಿವಾಸಿಗಿರುವ ಸಂತೋಷ್ ಡೆನಿಯಲ್ ಎಂದು ಗುರುತಿಸಲಾಗಿದೆ. 26 ವರ್ಷ ವಯಸ್ಸಿನ ಆತ ಕಾರ್ ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸುಮಾರು 1800 ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರು ಆತನ ಜಾಡು ಹಿಡಿದಿದ್ದರು. ಈ ವೇಳೆ, ಆತ ತಮಿಳುನಾಡು, ಕೇರಳದಲ್ಲಿ ತಪ್ಪಿಸಿಕೊಂಡು ಓಡಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.
ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಕೃತ್ಯದ ವೇಳೆ ಆತ ಬಳಸಿದ್ದ ಬೈಕ್ ನಂಬರ್ ಆಧರಿಸಿ ಗುರುತು ಪತ್ತೆಹೆಚ್ಚಲಾಗಿತ್ತು. ನಂತರ ಆತನ ಮನೆಯವರ ಬಳಿ ವಿಚಾರಿಸಿದಾಗ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಬಳಿಕ ಮೊಬೈಲ್ ಕೂಡ ಬಳಸದೆ ಆರೋಪಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾತ್ರವಲ್ಲದೆ, ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಯ ಜಾಡು ಹಿಡಿದಿದ್ದರು.
ಕೊನೆಗೆ ಆತ ಕೇರಳದ ಸಂಬಂಧಿಕರ ಮನೆಯಲ್ಲಿ ಇರುವುದು ಗೊತ್ತಾಗಿದೆ. ಪೊಲೀಸರು ಭಾನುವಾರ ಕೊಝಿಕ್ಕೋಡ್ ಸಮೀಪದ ನಡವನ್ನೂರು ಹಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ. ಆತ ಹೊಸೂರು, ಸೇಲಂ ಮೂಲಕ ಕೇರಳ ತಲುಪಿ ತಲೆಮರೆಸಿಕೊಂಡಿದ್ದ. 10 ಜನ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.


























