ಬಿಜೆಪಿ ನಾಯಕ ಜಾರ್ಜ್ ಕೋರ್ಟಿಗೆ ಶರಣಾಗತಿ
ತಿರುವನಂತಪುರ: ದ್ವೇಷ ಭಾಷಣದ ಆರೋಪದಲ್ಲಿ ಜಿಲ್ಲಾ ನ್ಯಾಯಾಲಯ ಮತ್ತು ಕೇರಳ ರಾಜ್ಯ ಉಚ್ಚ ನ್ಯಾಯಾಲಯಗಳಲ್ಲಿ ಜಾಮೀನು ಸಿಗದ ಕಾರಣ ಕೇರಳ ಬಿಜೆಪಿಯ ನಾಯಕ ಮಾಜಿ ಶಾಸಕ ಪಿ. ಸಿ. ಜಾರ್ಜ್ ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಶುಕ್ರವಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್, ನ್ಯಾಯಾಲಯವು ಅಂತಹ ಪ್ರಕರಣಗಳಲ್ಲಿ ಜಾಮೀನು ನೀಡಿದರೆ, ಅದು “ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದು ಹೇಳಿದರು.
ಹೈಕೋರ್ಟಿನಲ್ಲಿ ಜಾಮೀನು ಲಭ್ಯವಾಗದೆ ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿರುವುದನ್ನು ಗಮನಿಸಿದ ಪಿ ಸಿ ಜಾರ್ಜ್ ಅವರು ನ್ಯಾಯಾಲಯಕ್ಕೆ ಶರಣಾದರು.
ಮಾಜಿ ಶಾಸಕ ಜಾರ್ಜ್ ಅವರ ಮೇಲೆ ಟಿವಿ ಚಾನೆಲ್ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪ ಹೊರಿಸಲಾಗಿತ್ತು.
ಮುಸ್ಲಿಂ ಯೂತ್ ಲೀಗ್ ನಾಯಕ ಮುಹಮ್ಮದ್ ಶಿಹಾಬ್ ಅವರು ನೀಡಿದ ದೂರಿನ ಆಧಾರದ ಮೇಲೆ ಎರಟ್ಟುಪೆಟ್ಟಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು. ಕೊಟ್ಟಾಯಂ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ, ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಜಾರ್ಜ್ ವಿರುದ್ಧ ಬಿಎನ್ಎಸ್ನ ಸೆಕ್ಷನ್ 196(1)(ಎ) ಮತ್ತು 299 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(ಒ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





































