ಬೆಂಗಳೂರು: ‘ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಲಾಗಿತ್ತು’ ಎನ್ನಲಾದ ₹4.8 ಕೋಟಿಯನ್ನು ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಜಪ್ತಿ ಮಾಡಿದ್ದು, ಈ ಹಣವನ್ನು ವಾಪಸು ಕೊಡಿಸುವಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ.
ಈ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಸ್ಎಸ್ಟಿ ಅಧಿಕಾರಿ ದಶರಥ್ ವಿ. ಕುಮಾರ್ ಅವರು ಚುನಾವಣೆ ಅಕ್ರಮದ ಬಗ್ಗೆ ದೂರು ನೀಡಿದ್ದರು. ಆರಂಭದಲ್ಲಿ, ಎನ್ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ’ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಮೂಲಗಳು ಹೇಳಿವೆ.
‘ಐಪಿಸಿ 171 ಇ (ಲಂಚ ಸ್ವೀಕಾರ), ಐಪಿಸಿ 171 ಎಫ್ (ಚುನಾವಣೆಯಲ್ಲಿ ಅನಪೇಕ್ಷಿತ ಪ್ರಭಾವ ಬೀರುವಿಕೆ), ಐಪಿಸಿ 171 ಬಿ (ಮತದಾರರಿಗೆ ಹಣದ ಆಮಿಷ), ಐಪಿಸಿ 171 ಸಿ (ಚುನಾವಣೆ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ) ಆರೋಪದಡಿ ಡಾ.
ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.





































