ಬಿಜೆಪಿಯ ಹಿಡಿತಕ್ಕೆ “ವಿಜಯ”ಪುರ ಮಹಾನಗರಪಾಲಿಕೆ : “ವಿಜಯ”ದ ಮಾಲೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನ ಕೊರಳಿಗೆ
ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಮೇಯರ್ ಆಗಿ ಮಡಿವಾಳಪ್ಪ ಸಿದ್ರಾಮಪ್ಪ ಕರಡಿ ಹಾಗೂ ಉಪ ಮೇಯರ್ ಆಗಿ ಸುಮಿತ್ರಾ ಜಾಧವ ಆಯ್ಕೆಯಾಗಿದ್ದಾರೆ.
35 ಸದಸ್ಯ ಬಲದ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತವಿಲ್ಲ. ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರರು-5, ಎಐಎಂಐಎಂ-2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹೊಂದಿದ್ದಾರೆ. ಜನಪ್ರತಿನಿಧಿಗಳು ಸೇರಿ ಒಟ್ಟು 46 ಮಂದಿಗೆ ಮತದಾನದ ಹಕ್ಕು ಹೊಂದಿದೆ.
ಜನವರಿ 27ರಂದು ಮೇಯರ್ ಹಾಗೂ ಫೆಬ್ರವರಿ 12ರಂದು ಉಪ ಮೇಯರ್ ಸ್ಥಾನಕ್ಕೆ ಮತದಾನ ನಡೆದಿತ್ತು. ಸಾಕಷ್ಟು ರಾಜಕೀಯ ಮೇಲಾಟಗಳು ಹಾಗೂ ಕಾನೂನು ಹೋರಾಟಗಳಿಂದಾಗಿ ಏಳೆಂಟು ತಿಂಗಳ ಬಳಿಕ ಸೋಮವಾರ (ಆ.11) ಫಲಿತಾಂಶ ಹೊರ ಬಿದ್ದಿದೆ.
ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ಎಂ.ಎಸ್.ಕರಡಿ 24 ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ. ಕಾಂಗ್ರೆಸ್ ಸದಸ್ಯ ಅಶೋಕ ನ್ಯಾಮಗೊಂಡ ಪರ 22 ಮತಗಳು ಪಡೆದಿದ್ದಾರೆ.
ಉಪ ಮೇಯರ್ ಸ್ಥಾನದ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಿತ್ರಾ ಜಾಧವ 24 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಉಪ ಮೇಯರ್ ಚುನಾವಣೆ ಪ್ರಕ್ರಿಯೆ ವೇಳೆಗೆ ಕಾಂಗ್ರೆಸ್ ಬಹಿಷ್ಕಾರ ಹಾಕಿರುವುದರಿಂದ ಪಕ್ಷದ ಬೆಂಬಲಿತ ಅಭ್ಯರ್ಥಿ ಪಕ್ಷೇತರ ಸದಸ್ಯೆ ವಿಮಲಾ ಕಾಣೆ ಪರ ಯಾವುದೇ ಮತಗಳು ಚಲಾವಣೆಯಾಗಿಲ್ಲ.
ಯತ್ನಾಳ್ ನೇತೃತ್ವದಲ್ಲಿ ವಿಜಯೋತ್ಸವ:
ಮಹಾನಗರ ಪಾಲಿಕೆ ರಚನೆಯಾದ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾರಿನಲ್ಲೇ ಮೇಯರ್ ಅಭ್ಯರ್ಥಿ ಎಂ.ಎಸ್ ಕರಡಿ ಮತ್ತು ಉಪಮೇಯರ್ ಅಭ್ಯರ್ಥಿ ಸುಮಿತ್ರಾ ಜಾಧವ ಹಾಗೂ ಬಿಜೆಪಿ ಸದಸ್ಯರು ಪಾಲಿಕೆ ಕಚೇರಿಗೆ ಆಗಮಿಸಿರುವುದು ಗಮನಾರ್ಹವಾಗಿತ್ತು.
ಚುನಾವಣೆ ಫಲಿತಾಂಶ ಘೋಷಣೆ ಪ್ರಕ್ರಿಯೆ ವೇಳೆಯ ಯತ್ನಾಳ್ ಜತೆಗಿದ್ದರು. ಫಲಿತಾಂಶ ಘೋಷಣೆ ನಂತರ ಯತ್ನಾಳ್ ಪರವಾಗಿಯೇ ಎಲ್ಲ ಸದಸ್ಯರು ಘೋಷಣೆಗಳನ್ನು ಮೊಳಗಿಸಿದರ ಅಲ್ಲದೇ, ”ಜೈ ಬಿಆರ್ಪಿ” (ಬಸನಗೌಡ ಆರ್. ಪಾಟೀಲ) ಎಂದು ಜೈಕಾರಗಳನ್ನೂ ಹಾಕಿದರು. ಬಹುತೇಕ ಕಾರ್ಯಕರ್ತರು ಬಿಜೆಪಿ ಶಾಲು ಬದಲಿಗೆ “ಬಿಆರ್ಪಿ” ಎಂಬ ಹೆಸರಿನ ಶಾಲು ಧರಿಸಿದ್ದು ಗಮನ ಸೆಳೆಯಿತು.

































