ಬಿಜೆಪಿಯ ಗಾಳಕ್ಕೆ ಸಿಕ್ಕ ಸಿಪಿಎಂ ನಾಯಕ ಇ.ಪಿ.ಜಯರಾಜನ್ ?!
ತಿರುವನಂತಪುರಂ : ಕೇರಳದ ಅತ್ಯಂತ ಪ್ರಭಾವೀ ಸಿಪಿಎಂ ನಾಯಕರುಗಳಲ್ಲಿ ಒಬ್ಬರೆನಿಸಿದ ಇ.ಪಿ. ಜಯರಾಜನ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿ ಕೇಳಿಬಂದಿದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಕೇರಳ ಎಡರಂಗ ಒಕ್ಕೂಟದ (ಎಲ್ ಡಿ ಎಫ್ ) ಸಂಚಾಲಕ ಸ್ಥಾನದಿಂದ ಅವರನ್ನು ವಜಾಗೊಳಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕೇರಳ ರಾಜ್ಯದ ತ್ರಿಶೂರ್ ಕ್ಷೇತ್ರದಿಂದ ಸುರೇಶ್ ಗೋಪಿ ಬಿಜೆಪಿಯಿಂದ ಗೆಲುವು ಸಾಧಿಸಿರುವುದು ಕೇರಳ ರಾಜಕೀಯವಲಯದಲ್ಲಿ ಭಾರೀ ಚರ್ಚೆಗ್ರಾಸವನ್ನುಂಟು ಮಾಡಿತು.


ಈ ಎಲ್ಲಾ ಬೆಳವಣಿಗೆಯ ನಡುವೆ ಬಿಜೆಪಿ ತನ್ನ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನಕ್ಕೂ ಮುನ್ನಾ ಸಿಪಿಐ(ಎಂ) ಮುಖಂಡರತ್ತ ಕಣ್ಣು ಹಾಯಿಸಿದೆ.
ಪಕ್ಷದ ಸಿದ್ಧಾಂತದಲ್ಲಿ ಸಿಪಿಐ(ಎಂ) ಹಾಗೂ ಬಿಜೆಪಿ ಬದ್ಧ ವೈರಿಗಳೆಂದು ಗುರುತಿಸಿಕೊಂಡಿವೆ. ಇವೆಲ್ಲವೂ ಕಾರ್ಯಕರ್ತರಿಗೆ ಮಾತ್ರ ಎಂಬಂತಿದೆ ಪ್ರಸಕ್ತದ ಕೇರಳದ ರಾಜಕೀಯ ಸ್ಥಿತಿ-ಗತಿ. ಅದು ಸಿಪಿಐ(ಎಂ)ನ ಭದ್ರಕೋಟೆಯಾಗಿರುವ ಕಣ್ಣೂರು ಜಿಲ್ಲೆಯಲ್ಲಿ ಎಂಬುವುದು ಗಮನಾರ್ಹವಾಗಿದೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಪಿಐ(ಎಂ) ಪಕ್ಷವು ಕೇರಳದ ಹಿರಿಯ ಸಿಪಿಎಂ ನಾಯಕ, ಪಕ್ಷದ ಕೇಂದ್ರ ಸಮಿತಿ ಸದಸ್ಯ ಮಾಜಿ ಸಚಿವ ಇ.ಪಿ. ಜಯರಾಜನ್ ಅವರನ್ನು ಕೇರಳ ಎಡರಂಗ ಒಕ್ಕೂಟದ ಸಂಚಾಲಕ ಸ್ಥಾನದಿಂದ ವಜಾಗೊಳಿಸಲಾಗಿದೆ. ಬದಲಾಗಿ ಅವರ ಸ್ಥಾನಕ್ಕೆ ಇನ್ನೋರ್ವ ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಟಿ.ಪಿ. ರಾಮಕೃಷ್ಣನ್ ಅವರನ್ನು ಸಂಚಾಲಕರಾಗಿ ನೇಮಿಸಲಾಗಿದೆ.


ಕೇರಳ ಸಿಪಿಎಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಕದ ಅತ್ಯಂತ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡವರು ಇ ಪಿ ಜಯರಾಜನ್. ಪಿಣರಾಯಿ ಅವರ ಅತೃಪ್ತರಾಗಿಯೂ ಗುರುತಿಸಿಕೊಂಡವರು. ಅವರಿಗೆ ರಾಜ್ಯ ಸಿಪಿಎಂ ಕಾರ್ಯದರ್ಶಿ ಆಗುವ ಹಂಬಲವಿತ್ತು. ಆ ಸ್ಥಾನ ಎಂ ವಿ ಗೋವಿಂದನ್ ಪಾಲಾದ ಮೇಲೆ ಜಯರಾಜನ್ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯತೊಡಗಿದರು.





































