ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ಪ್ರಬಲ ಪಕ್ಷಗಳ ನಡುವಿನ ಪ್ರತಿಸ್ಪರ್ಧೆಯ ಹೊರತಾಗಿಯೂ ಪ್ರಭಾವೀ ಪಕ್ಷ ಬಿ ಜೆ ಪಿ ಗೆ ಇನ್ನೊಂದು ನಡುಕ ಹುಟ್ಚಿದೆ. ಅದುವೇ ಅಭ್ಯರ್ಥಿಯನ್ನೆ ವಿರೋಧಿಸುವ ಮತದಾನ ಕ್ರಿಯೆ ನೋಟ(Nota= None of the above)
ಜಿಲಾಧಿಕಾರಿ ಮತ್ತವರ ಕೈ ಕೆಳಗಿನ ತಂಡಗಳು ಮಾಡಬೇಕಾದ ಮತದಾನ ಜಾಗೃತಿ ಕೆೆಲಸವನ್ನು ಬಿಜೆಪಿ ಮಾಡುತ್ತಿದೆ.ಮಂಗಳೂರು ಫಲಿತಾಂಶದ ಬಿಜೆಪಿ ಗೆಲುವಿನ ಅಂತರ ಬರೇ ಮೂವತ್ತು ಸಾವಿರಕ್ಕೆ ಇಳಿದಿದೆಯಂತೆ!. ಇದು ನಾನು ಅವರಿವರ ಮಾತು ಹೆಕ್ಕಿ ಬರೆಯುತ್ತಿರುವುದಲ್ಲ ದೇಹದ ನಾಳಗಳಲ್ಲಿ ಹರಿಯುತ್ತಿರುವ ಬಿಜೆಪಿ ರಕ್ತದವರೇ ಕಿವಿಗೆ ಬಾಯಿ ಕಚ್ಚಿಟ್ಚು ಹೇಳುತ್ತಿದ್ದಾರೆ.
ಕರಾವಳಿಯ ಬಿಜೆಪಿ ಅಕ್ಷರಶಃ ಭಯಗ್ರಸ್ತವಾಗಿದೆ. ಆ ಕಡೆಯಿಂದ ಕಾಂಗ್ರೆಸ್ಸಿನವರು , ಜಿಲ್ಲೆಯ ಪ್ರಬಲ ಸಂಖ್ಯೆಯ ಸಮುದಾಯವೊಂದನ್ನು ತಮ್ಮ ಅಭ್ಯರ್ಥಿಯ ಗೆಲುವಿನ ಟ್ರಂಪ್ ಕಾರ್ಡಾಗುತ್ತದೆ ಎನ್ನುವ ಲೆಕ್ಕಾಚಾರದ ತಾಳೆ ಹಾಕುತ್ತಿದೆ. ಪದ್ಮರಾಜ್ ಆರ್ ಪೂಜಾರಿಯವರನ್ನು ಆ ಸಮುದಾಯ ಇನ್ನೂ ಕೂಡ ಪರಿಪೂರ್ಣವಾಗಿ ಗೆಲ್ಲಿಸುವ ಭರವಸೆ ಕೊಡದಿದ್ದರೂ ಬಾಕಿಯುಳಿದವರ ಬಾಯಿಂದಲೇ ಅರ್ಥಾತ್ ಕಾಂಗ್ರೆಸ್ಸಿಗರಿಂದಲೇ ಹೊಸ ಟ್ರೆಂಡ್ ಸೆಟ್ ಮಾಡಲಾಗಿದೆ. ಅದೇನೆಂದರೆ, “ ಈ ಸರ್ತಿ ಬಿಲ್ಲವರೆಲ್ಲರೂ ಪದ್ಮರಾಜ್ ಆರ್ ಸುವರ್ಣರಿಗೆ ಬೆಂಬಲ”.! ಅದು ಪ್ಲಸ್ ಆಗುತ್ತದೆ ಸತ್ಯ.ಬಿಜೆಪಿಯವರ ಟ್ರೆಂಡ್ ಸೆಟ್ಟಿಂಗ್ ವರ್ತನೆಯ ಕೆಲವನ್ನು ಕಾಂಗ್ರೆಸ್ಸೂ ಕಲಿತಿದೆ!
ಅದೇ ಬಿಲ್ಲವರ ಇನ್ನೊಂದು ಮಗ್ಗುಲಿಂದ ಬಿಜೆಪಿಯನ್ನು ಅಕ್ಷರಶಃ ಇರಿಯುವಂತೆ ಮಾತಾಡುತ್ತಿದೆ,” ಪ್ರವೀಣ್ ನೆಟ್ಚಾರುವಿನ ಪತ್ನಿ ನೂತನ ಪ್ರವೀಣಳಿಗೆ ಬಿಜೆಪಿ ಟಿಕೆಟ್ ಕೊಡಬೇಕಾಗಿತ್ತು.ಪಕ್ಷ ಪ್ರೇಮ,ಹಿಂದುತ್ವದ ಅಭಿಮಾನಕ್ಕೆ ತನ್ನ ಯೌವನದ ಪ್ರಾಣವನ್ನೆ ಪಣಕ್ಕಿಟ್ಟವನಿಗೆ ಬಿಜೆಪಿಯು ಸ್ಮರಣೀಯ ಉಡುಗೊರೆಯಾಗಿ ಆತನ ಪತ್ನಿಗೆ ಲೋಕಸಭಾ ಟಿಕೆಟ್ ಕೊಡಬೇಕಾಗಿತ್ತು.”
ಹಲವು ರೀತಿಯ ಭಾವನಾತ್ಮಕ ಮಾತುಗಳು ವಿಚಾರಗಳಾಗಿ ,ಚರ್ಚೆಗಳಾಗಿ ಜನರ ಬಾಯಿಂದ ಬಾಯಿಗೆ ಕ್ಷಣ ಕ್ಷಣದಲ್ಲಿಯೆ ಹರಿದಾಡುತ್ತಿದೆ. ನೂತನ ಪ್ರವೀಣಳಿಗೆ ರಾಜಕೀಯ ಸ್ಥಾನಮಾನ ನೀಡಬೇಕಾಗಿತ್ತು ಎನ್ನುವುದು ಯಾವತ್ತೋ ಇತ್ಯರ್ಥವಾಗಬೇಕಾಗಿತ್ತು ಆದರೆ ಈಗ ಭಾವನೆಯನ್ನು ಕೆರಳಿಸುವ ಅವಕಾಶಕ್ಕೆ ಬಳಕೆಯಾಗತೊಡಗಿದೆ.
ಆ ಎಲ್ಲ ಚಿಲ್ಲರೆ ಅಂತೆ ಕಂತೆಗಳಿಗೆ ಬಿಜೆಪಿ ಕ್ಯಾರೇ ಅನ್ನುವುದಿಲ್ಲ,ಅದೆಲ್ಲ ಮತಗಳ ಪರಿವರಿವರ್ತನೆಗೆ ಸಾಕಾಗುವುದಿಲ್ಲ ಎಂದು ಪಕ್ಷ ಬಲವಾಗಿ ತಿಳಿದುಕೊಂಡಿದೆ.ಈಗ ಮುಖ್ಯ ವಿಷಯವೇನೆಂದರೆ ನೋಟ ಮತದಾನ. ಅದರಲ್ಲಿ ಬಿಜೆಪಿಯ ಸಾವಿರ ಮತಗಳೇ ನೋಟ ಕ್ರಮಕ್ಕೆ ಪರಿವರ್ತನೆಯಾಗುವ ಭಯ.
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ,ಉಜಿರೆ ಅಲ್ಲಿನ ವಿದ್ಯಾರ್ಥಿನಿಯಾಗಿದ್ದ ಕು।ಸೌಜನ್ಯಳ ಸಾಮೂಹಿಕ ಅತ್ಯಾಚಾರ ಹಾಗೂ ಭೀಕರ ಕೊಲೆಯ ತನಿಖೆಯ ಅತೃಪ್ತಿಯು ಇದೀಗ ಚುನಾವಣೆಯ ಮತದಾನದಲ್ಲಿ ಪರಾಕಾಷ್ಠೆ ಮೀರಲಿದೆ. ಸೌಜನ್ಯ ಕೊಲೆ ಕೇಸು ತೀರ್ಮಾನದ ನ್ಯಾಯ ಕೇಳುವ ಪರವಿರುವವರು ಪ್ರತಿಯೊಬ್ಬರೂ ಈ ಬಾರಿ ನೋಟ ಚಲಾಯಿಸುವುದು ಬಹುತೇಕ ನಿರ್ಧರಿತವಾಗಿದೆ.
ಎಲ್ಲ ವರ್ಗ ಜಾತಿಯಲ್ಲೂ ಸೌಜನ್ಯ ಪರ ನಿಂತವರಿದ್ದಾರೆ.ಸುಳ್ಯ,ಪುತ್ತೂರು ಹಾಗೂ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿನ ಗೌಡ ಸಮುದಾಯದವರು ಬಹುತೇಕವಾಗಿ ನೋಟ ಚಲಾವಣೆಯ ನಿರ್ಣಯ ಕೈಗೊಳ್ಳುವ ಆತುರದಲ್ಲಿದ್ದಾರೆ.ಆ ಸೂಕ್ಷ್ಮ ವಿಷಯ ಅರಿತ ಬಿಜೆಪಿ ಈಗ ಕಂಡ ಕಂಡವರನ್ನು ತಡೆದು ನಿಲ್ಲಿಸಿ,ಮನೆ ಮನೆಗೆ ಭೇಟಿ ನೀಡಿ ಮತದಾನ ನಮ್ಮ ಹಕ್ಕು ಮತದಾನ ನಿಷೇಧಿಸಬಾರದು ಎಂದಿತ್ಯಾದಿ ಬೋಧನೆ ಕೊಡುತ್ತಿದ್ದಾರೆ! ಮಹೇಶ ಶೆಟ್ಟಿ ತಿಮರೋಡಿಯವರ ಸೇನೆಗೆ ನೋಟ ಮತದಾನ ಅಭಿಯಾನಕ್ಕೆ ಚಲಾವಣೆ ಕೊಟ್ಟಾಗಿದೆ. ಕಂಡ ಕಂಡಲ್ಲೆಲ್ಲ ಯುವಕರು ನೋಟ ಉಪದೇಶ ಮಾಡುತ್ತಿದ್ದಾರೆ ಎನ್ನುವುದನ್ನು ನಾನು ಕಂಡಿರುತ್ತೇನೆ,ನನಗೂ ಮನವಿ ಮಾಡಿರುತ್ತಾರೆ.
ಸುಳ್ಯ ,ಪುತ್ತೂರಿನ ಅನೇಕ ವಿದ್ಯಾವಂತ ಮತದಾರನು ಕೂಡಾ ಮತದಾನದಲ್ಲಿ ನೋಟ ಬೆಂಬಲಿಸಲು ನಿರ್ಧಾರ ಮಾಡಿರುವುದು ಒಂದು ರೀತಿಯ ವಿಭಿನ್ನ ಮಾದರಿಯ ಹೋರಾಟವಾಗಿದೆ. ನ್ಯಾಯಾಲಯದಲ್ಲಿ ಮೇಲ್ಮನವಿಯಾಗಿ ಕುಳಿತಿರುವ ಸೌಜನ್ಯ ಪ್ರಕರಣಕ್ಕೆ ಬೇರೇನು ದಾರಿ ಇಲ್ಲವೆಂದರೂ ಭಾವನಾತ್ಮಕವಾಗಿ ಜರ್ಝರಿತಗೊಂಡ ಮನಸ್ಸಿಗೆ ಯಾವ ಜನಪ್ರತಿನಿಧಿಯೂ ನಮಗೆ ಬೇಡವೆನ್ನುವಷ್ಟು ಜಿಗುಪ್ಸೆ ತರಿಸಿದೆ.ಮಾಜಿ ಶಾಸಕ ಕೆ. ವಸಂತ ಬಂಗೇರ ಒಬ್ಬನೇ ಒಬ್ಬ ಹೊರತು ಪಜಿಸಿದರೆ ಬೇರಾವನೇ ಜನಪ್ರತಿನಿಧಿಯೂ ಸೌಜನ್ಯ ಸಾವಿಗೆ ನ್ಯಾಯ ಕೇಳುವಲ್ಲಿ ಧನಿಗೂಜಿಸಲಿಲ್ಲ ಎನ್ನುವುದು ಕರಾವಳಿ ರಾಜಕೀಯದ ಘೋರ ಇತಿಹಾಸ. ಕುದ್ರೋಳಿ ದೇವಸ್ಥಾನದಲ್ಲೂ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವ ಆರೋಪವು ಕೇಳಿ ಬರುತಿತ್ತು ಆ ಕಾರಣಕ್ಕಾಗಿಯೆ ಪದ್ಮರಾಜರಿಗೂ ಮತ ಕೊಡದೆ ನೋಟ ಮತದಾನಕ್ಕೆ ನಿರ್ಣಯ ಮಾಡಿಕೊಂಡಿರುತ್ತಾರೆ.
ಇನ್ನು ಕಾಂಗ್ರೆಸ್ಸಿನಲ್ಲಿ ಯಾವ ತಂತ್ರಗಾರಿಕೆ ಬಳಕೆಯಾಗುತ್ತಿದೆ ಎನ್ನುವುದಕ್ಕೆ ಅವಕಾಶವಿಲ್ಲ.ಅವರದು ಹಳೆಯ ಅಂಬಾಸಿಡರ್ ಕಾರು ಅಷ್ಟೆ. ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರು ವನ್ ಮೇನ್ ಶೋ (ಏಕ ವ್ಯಕ್ತಿ ಪ್ರದರ್ಶನ)ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪ,ನೋವು ಕಾರ್ಯಕರ್ತರ ಎದೆಯಾಳದಲ್ಲಿ ಚುಚ್ಚಿಕೊಂಡಿದೆಯೆನ್ನಲಾಗುತ್ತಿದೆ.ಆದರೂ ಅಭ್ಯರ್ಥಿಯನ್ನು ಕೆಲವೊಂದು ಗುಣಗಳಲ್ಲಿ ಮೆಚ್ಚಿಕೊಳ್ಳುತ್ತಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ಸುಮಾರು ಎರಡು ಲಕ್ಷದ ಎಪ್ಪತ್ತೈದು ಸಾವಿರ ಮತಗಳ ಮುನ್ನಡೆ ಈ ಬಾರಿಗೆ ಅರ್ಧಕ್ಕಾದರೂ ಕುಸಿಯಬೇಕೆಂದರೆ ಅದು ಸುಲಭದ ಊಹನೆಯಲ್ಲ. ತಾವು ಎಪ್ಪತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ ಎಂಬುದಾಗಿ ಪಕ್ಷ ಮತ್ತು ಅಭ್ಯರ್ಥಿ ಹೇಳಿಕೆ ನೀಡಿದ್ದರ ಹಿಂದೆ ವ್ಯವಸ್ಥಿತ ಕಾರ್ಯತಂತ್ರ ನಡೆದಿದೆ ನೂರಕ್ಕೆ ನೂರು ಸತ್ಯ.
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನಿರೀಕ್ಷೆಯ ಮುನ್ನಡೆ ಹಾಗೂ ಜಯ ಲಭಿಸುವುದು ಸುಲಭವಲ್ಲ ಎನ್ನುವ ಮನವರಿಕೆಯು ಕಡೇ ಪಕ್ಷ ಪದ್ಮರಾಜ್ ಆರ್ ಪೂಜಾರಿಯವರಾದರೂ ನಮ್ಮವರ ಕಡೆಯಿಂದ ಸಂಸದನಾಗಲೇಬೇಕು ಎಂಬ ಹಠಧೋರಣೆಯನ್ನು ಸಮುದಾಯದಲ್ಲಿ ಪಾಲಿಸಿಕೊಳ್ಳಲಾಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ.
ಇನ್ನು ನಳಿನ್ ಕುಮಾರ್ ಅವರಿಂದ ಪಕ್ಷ ವಿರೋಧಿ ಚಟುವಟಿಕೆ ಆಗುವುದಿಲ್ಲ ಕಾರಣ,ಆತ ಒಬ್ಬ ಅಪ್ಪಟ ಆರ್ ಎಸ್ ಎಸ್ ಕಾರ್ಯಕರ್ತ.ಅವರ ಬೆಂಬಲದಿಂದ ಕಾಮಗಾರಿ ಗುತ್ತಿಗೆ ಪಡೆದಿರುವವರೇನಾದರೂ ಈ ಬಾರಿ ಅಸಮಾಧಾನ ತೋರಿಸಿಕೊಂಡರೂ ಅದಕ್ಕೆ ನಳಿನ್ ಕುಮಾರ್ ಕಟೀಲ್ ಎಳ್ಳಷ್ಟೂ ಭಾಗೀದಾರನಾಗುವುದಿಲ್ಲ.
ಯಾರೇ ಗೆದ್ದರೂ ,ಸೋತರೂ ಅದರ ಅಂತರ ಮೂವತ್ತು ಸಾವಿರಗಳೆಂಬುದು ಸತ್ಯ.
-ವಿ. ಕೆ. ವಾಲ್ಪಾಡಿ






































