ಬಂಟ್ವಾಳ, ಆ. 21: ಬಸ್ನಲ್ಲಿ ಪ್ರಯಾಣಿಸುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದ ಆರೋಪದ ಮೇಲೆ 47 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಜಯಂತ್ (47) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನಂತೆ, ಬಾಲಕಿ ಕಳೆದ ಕೆಲವು ದಿನಗಳಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಮಧ್ಯವಯಸ್ಕ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಆ. 19ರ ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗಲೂ ಅದೇ ವ್ಯಕ್ತಿ ಆಕೆಯನ್ನು ಗಮನಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಆತಂಕಗೊಂಡ ಬಾಲಕಿ, ತನ್ನ ತಾಯಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ವಿಷಯ ತಿಳಿಸಿದ್ದಾಳೆ. ಬಳಿಕ ಬಾಲಕಿಯ ತಾಯಿ ಕಚೇರಿ ಮಾಲೀಕರೊಂದಿಗೆ ಬಸ್ ನಿಲ್ದಾಣಕ್ಕೆ ತೆರಳಿ ವಿಚಾರಿಸಿದಾಗ, ಆರೋಪಿತ ವ್ಯಕ್ತಿ ಅಲ್ಲಿಯೇ ಇದ್ದ ಎನ್ನಲಾಗಿದೆ. ಆತನನ್ನು ಪ್ರಶ್ನಿಸಿದಾಗ ತನ್ನ ಹೆಸರು ಜಯಂತ್ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ದೂರು ಸ್ವೀಕರಿಸಿದ ಬಂಟ್ವಾಳ ಪಟ್ಟಣ ಪೊಲೀಸರು ಅಪರಾಧ ಸಂಖ್ಯೆ 116/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 78 ಹಾಗೂ ಪೋಕ್ಸೋ ಕಾಯ್ದೆ 2012ರ ಸೆಕ್ಷನ್ 12ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಸರಪಾಡಿ ನಿವಾಸಿ ಜಯಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.