ಬಾಗಲೂರು ಕೋಟೆ ಶ್ರೀ ಮಾರಿಯಮ್ಮ ದೇವಳದ ರಥೋತ್ಸವ ಸಂಪನ್ನ : ಬಾಗಲೂರಿಗೂ ಕಾಸರಗೋಡಿಗೂ ಎತ್ತಣ ಸಂಬಂಧ?

ವರದಿ: ಆರ್.ಬಿ.ಜಗದೀಶ್
ಬೆಂಗಳೂರು : ತಮಿಳುನಾಡು ಹೊಸೂರು ಬಾಗಲೂರಿನ ಕೋಟೆ ಶ್ರೀ ಮಾರಿಯಮ್ಮ ದೇವಳದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಪಲ್ಲಕ್ಕಿ ಹಾಗೂ ರಥೋತ್ಸವ ಜರುಗಿತು.
ಯುಗಾದಿ ಹಬ್ಬದಂದು ಆರಂಭಗೊಂಡ ವಾರ್ಷಿಕೋತ್ಸವವು ಮೂರು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ಮೂಲಕ ಸಂಪನ್ನಗೊಂಡಿದೆ.
ಬಾಗಲೂರು ಗ್ರಾಮ ದೇವತೆ ಎಂದೇ ಆರಾಧಿಸಿಕೊಂಡು ಬಂದಿರುವ ಬಾಗಲೂರು ಕೋಟೆ ಶ್ರೀ ಮಾರಿಯಮ್ಮ ದೇವರ ವಾರ್ಷಿಕ ಮಹೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತೀಯದಿಂದ ಅಸಂಖ್ಯಾತ ಭಕ್ತಾದಿಗಳು ಅಗಮಿಸಿದರು.
ತ್ರಿ ಭಾಷಾ ಸಂಗಮ ಭೂಮಿ
ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕು ವ್ಯಾಪ್ತಿಯೊಳಪಟ್ಟ ಬಾಗಲೂರು ತ್ರಿಭಾಷಾ ಸಂಗಮ ಭೂಮಿಯಾಗಿದೆ.
ತಮಿಳುನಾಡು ರಾಜ್ಯ ವ್ಯಾಪ್ತಿಯೊಳಪಟ್ಟ ಹೊಸೂರು ತಾಲೂಕು ಕರ್ನಾಟಕ ರಾಜ್ಯದ ರಾಜಧಾನಿಯಿಂದ 52 ಕಿ.ಮೀ ದೂರದಲ್ಲಿ ಬಾಗಲೂರು ಇದೆ. ಬಾಗಲೂರಿನಲ್ಲಿ ತೆಲುಗು ಭಾಷಿಗರು ಗಣನೀಯ ಸಂಖ್ಯೆಯಲ್ಲಿ ಇದ್ದು, ವ್ಯವಹಾರಿಕವಾಗಿ ಕನ್ನಡ ಬಾಷೆಯನ್ನು ಅರಿಯಬಲ್ಲವರು. ರಾಜ್ಯ ಬಾಷೆ ತಮಿಳುಯನ್ನು ಸಂಭಾಷಿಸುವ ಜೊತೆ ಬರೆಯಬಲ್ಲವರು.





ಬಾಗಲೂರಿಗೂ ಕಾಸರಗೋಡಿಗೂ ನಂಟು !
ಕಾಸರಗೋಡು ಸಿರಿಬಾಗಿಲು ಮೂಲದ ಬಾಬುರಾವ್ ಅವರು ತನ್ನ ಜೀವಿತಾವಧಿಯಲ್ಲಿ ಬಾಗಲೂರು ಶ್ರೀ ಮಾರಿಯಮ್ಮ ದೇವರ ಪರಮ ಭಕ್ತ.

ಎಳೆ ವಯಸ್ಸಿನಲ್ಲಿ ಬಾಗಲೂರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ ಅವರು ಬಾಗಲೂರು ಶ್ರೀ ಮಾರಿಯಮ್ಮನಿಗೆ ಗುಡಿ ಕಟ್ಟಿಸಿ ಪ್ರತಿದಿನ ಪೂಜಾಕೈಂಕರ್ಯ ನಡೆಸುತ್ತಿದ್ದರು.
ಹೋಟೆಲ್ ಉದ್ಯಮದಲ್ಲಿ ಪ್ರಗತಿ ಹೊಂದಿ, ಬೆಂಗಳೂರು ಕೆ.ಆರ್.ಮಾರ್ಕೆಟ್ ನಲ್ಲಿ ಸ್ವಂತ ಕಟ್ಟಡದಲ್ಲಿ ದುರ್ಗಾಭವನ್ ಹೋಟೆಲ್ ಆರಂಭಿಸಿದ ಸಂದರ್ಭದಲ್ಲಿ ನಂಬಿಕೊಂಡು ಬಂದ ಬಾಗಲೂರು ಶ್ರೀ ಮಾರಿಯಮ್ಮ ದೇವರಿಗೆ 2 .5 ಎಕರೆ ಭೂಮಿಯನ್ನು ಉದಾರವಾಗಿ ನೀಡಿದರು.

ಆ ಭೂಮಿಯಲ್ಲಿ ಕೃಷಿ ಬೆಳೆಸಿ ಬರುವ ಆದಾಯದಲ್ಲಿ ಬಾಗಲೂರು ಶ್ರೀ ಮಾರಿಯಮ್ಮನ ದೈನಂದಿನ ಪೂಜಾ ಕೈಂಕರ್ಯದ ಜೊತೆಗೆ ವಾರ್ಷಿಕ ಮಹೋತ್ಸವ ಸಂದರ್ಭದಲ್ಲಿ ಪಲ್ಲಕ್ಕಿ ಉತ್ಸವ ನಡೆಸಬೇಕೆಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದರು.
ಒಪ್ಪಂದ ಪತ್ರವೂ ತೆಲುಗಿನಲ್ಲಿ ಇರುವುದು ಗಮನಾರ್ಹವಾಗಿದೆ.
ಆ ನಂತರದ ದಿನಗಳಲ್ಲಿ ಬಾಬುರಾವ್ ಅವರ ಹೆಸರಿನಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತಾ ಬಂದಿದೆ.












































