ಬಹು ಜನಪ್ರಿಯ
ನ್ಯೂ ಪಡಿವಾಳ್ಸ್ ರೆಸ್ಟಾರೆಂಟ್, ಮೂಡುಬಿದಿರೆ
ಹೊಟೇಲ್ ಉಪಚಾರಕ್ಕೆ ಸಂಬಂಧಿಸಿದಂತೆ ಮೂಡುಬಿದೆರೆಯಲ್ಲಿ ಜನಪ್ರಸಿದ್ಧಿ ಪಡೆದಿರುವುದು ಪಡಿವಾಳ್ಸ್ ಹೊಟೇಲ್! ಅದೇ ಹೆಸರು ,ಹೊಸ ಶುಚಿ ರುಚಿಯಲ್ಲಿ ಮುಂದುವರಿಯುತ್ತಿರುವುದು ಹಾಗೂ ಮುಂದುವರಿಸುತ್ತಿರುವುದು ಈಗ ಮಾತ್ರ “ನ್ಯೂ ಪಡಿವಾಳ್ಸ್ ರೆಸ್ಟಾರೆಂಟ್ “

1986ರಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆ ಬದಿಯಲ್ಲಿ ಚೌಟರ ಅರಮನೆಯವರ ಬಾಡಿಗೆ ಕಟ್ಚಡದಲ್ಲಿ ಪಡಿವಾಳ್ಸ್ ಹೊಟೇಲ್ ಪ್ರಾರಂಭಗೊಂಡಿತು. ಅದನ್ನು ಪ್ರಾರಂಭಿಸಿದ್ದು ಓರ್ವ ಪ್ರೌಢ ಶಾಲಾ ಅಧ್ಯಾಪಕ! ಅವರಿಗೆ ರುಚಿಯಾದ ತಿಂಡಿ,ಅಡುಗೆ ಮಾಡುವುದರಲ್ಲಿ ಬಹಳ ಆಸಕ್ತಿಯಿತ್ತು. ತಾನೇಕೆ ಹೊಟೆಲ್ ಸೇವೆ ಕೊಡಬಾರದು ಎಂಬ ಕನಸು ಕಾಣತೊಡಗಿದರು. ಅದಕ್ಕೆ ಪೂರಕವಾಗಿ ಅವರ ಮಗಳ ಗಂಡ ಸನ್ಮತ್ ಕುಮಾರ್ ಅವರಿಗೂ ಬಗೆಬಗೆಯ ತಿಂಡಿ ತಯಾರಿಸುವುದರಲ್ಲಿ ಎಲ್ಲಿಲ್ಲದ ಶ್ರದ್ಧೆ,ಆಸಕ್ತಿ. ಸ್ವತಂತ್ರವಾದ ಬೇರೆ ಉದ್ಯಮವನ್ನು ಬಿಟ್ಚು ಮಾವನ ಆಸಕ್ತಿಗೆ ಬೆನ್ನಾದರು ಕೂಡ.
ಆ ಮೇಷ್ಟ್ರು ಯಾರೆಂದರೆ , ಸಿ. ಕೆ. ಪಡಿವಾಳ್. ಮೂಡುಬಿದಿರೆಯ ಡಾ। ಬಾಬೂ ರಾಜೇಂದ್ರ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾಗಿದ್ದವರು.
ಅಂದು ಆ ಪಡಿವಾಳ್ಸ್ ಹೊಟೇಲ್ನಲ್ಲಿ ಚಹಾ ತಿಂಡಿ ಉಪಾಹಾರ ಮಾಡುವುದು,ಊಟ ಮಾಡುವುದೆಂದರೆ ದೊಡ್ಡ ಪ್ರತಿಷ್ಠೆಯಾಗತೊಡಗಿತು. ಕಾರ್ಕಳದಲ್ಲಿ ಉದ್ಯೋಗ ಮಾಡುತ್ತಿರುವವರು ಅನೇಕರು ಮೂಡುಬಿದಿರೆಗೆ ಬಂದು ಪಡಿವಾಳ್ಸ್ ಹೊಟೇಲ್ನಲ್ಲಿ ಮಧ್ಯಾಹ್ನ ಉಂಡು ಹೋಗುವುದೆಂದರೆ ಆ ಮಾತನ್ನು ಯಾರೂ ನಂಬಲಾರರು! ನಾಲ್ಕಾರು ಮಂದಿ ಒಟ್ಟಾಗಿ ವಾಹನದಲ್ಲಿ,ಬಸ್ಸಿನಲ್ಲಿ ಬರುವುದು! ಪಡಿವಾಳ್ಸ್ ನ ಊಟ,ತಿಂಡಿಗಳ ರುಚಿ ಸವಿದವನಿಗೆ ಗೊತ್ತು!

ಸಿ. ಕೆ. ಪಡಿವಾಳ್,ಅವರ ಅಳಿಯ ಸನ್ಮತ್ ಕುಮಾರ್,ಅವರ ಮಗ ಹರ್ಷವರ್ಧನ ಪಡಿವಾಳ್ ಮೂವರು ಹಾಕಿದ ಪರಿಶ್ರಮದ ಪರಿಣಾಮ ಹೇಗಾಯಿತೆಂದರೆ ಮುಂಬೈ ನಿವಾಸಿಗಳಿಗೂ ಊರಿಗೆ ಬಂದಾಗ ವಾಸಕ್ಕೆ ಮತ್ತು ಊಟ ಉಪಾಹಾರಕ್ಕೆ ಪಡಿವಾಳ್ಸ್ ಹೊಟೇಲು ಖಾಯಂ ಆಗತೊಡಗಿತು. ದೇಶ,ವಿದೇಶದಲ್ಲಿ ದುಡಿಯುವ ಊರಿನವರಿಗೆಲ್ಲ ಪಡಿವಾಳ್ಸ್ ಹೊಟೇಲು ಕೇಂದ್ರ ಸ್ಥಾನವಾಗತೊಡಗಿತು. ಮೂಡುಬಿದಿರೆಗೆ ಬರುವವರು ಅಲ್ಲೇ ಕೆರಾಫ್ ವಿಳಾಸ ಮಾಡಿಕೊಂಡದ್ದು ಹೊಟೇಲಿನ ಬಹುದೊಡ್ಡ ಹೆಗ್ಗಳಿಕೆ!
ಸನ್ಮತ ಕುಮಾರ್ ಪಾಕಪ್ರವೀಣನಾಗಿ ಒಳಗೇ ಇದ್ದರೆ, ಹೊರಗಡೆ ಗ್ರಾಹಕರ ಸುಧಾರಿಕೆ ಉಸ್ತುವಾರಿ ಮತ್ತು ನಗದು ಕೌಂಟರಿಗೆ ಹರ್ಷವರ್ಧನ ಪಡಿವಾಳ್. ಶಾಲಾ ಸಮಯ ಮುಗಿದ ನಂತರ ಸಿ. ಕೆ. ಪಡಿವಾಳರ ಆಗಮನ.ಅವರೂ ಕೂಡ ಅಡುಗೆ ಕೋಣೆಯಲ್ಲಿ ಮತ್ತು ತರಕಾರಿ ಉಗ್ರಾಣದಲ್ಲಿಯೇ ಹೆಚ್ಚು ಹೊತ್ತು ಕಾಲ ಕಳೆಯುವುದು. ಹಾಳಾದ,ಕೊಳೆತ,ಕೆಟ್ಟ ತರಕಾರಿಯನ್ನು ಆಸೆ ಮಾಡದೆ ಬೇರ್ಪಡಿಸಿ ಕಸದ ರಾಶಿಗೆ ಬಿಸಾಡುವುದು ಅವರ ಮುಖ್ಯ ಕೆಲಸ. ಆ ನಂತರ ಕ್ಯಾಶ್ ಟೇಬಲಿಗೆ ಬರುವುದು.
ಮಾವ,ಅಳಿಯರಿಬ್ಬರೂ ಅಡುಗೆ ,ಸಾಂಬಾರು ಮುಂತಾದ್ದರ ಖಾರ ಉಪ್ಪು ಹುಳಿಯನ್ನು ನೆಕ್ಕಿತಿಳಿದೇ ಹೊರಗೆ ಸಪ್ಲೈಗೆ ಕೊಡುವುದು. ಅಂಥದ್ದಾದ ಕಟ್ಟುನಿಟ್ಟಿಮಲ್ಲಿ ತಿಂಡಿ ,ಪಾಕಗಳ ರುಚಿಯನ್ನು ಒಂದೇ ತೆರನಾಗಿ ಕಾಪಾಡಿಕೊಳ್ಳುತ್ತಿದ್ದರು.
ಹಾಗೆನೆ. ಹರ್ಷವರ್ಧನ ಪಡಿವಾಳ್ ಕೂಡಾ ಗ್ರಾಹಕರ ಆಕರ್ಷಣೆಯ ಕೇಂದ್ರವಾಗಿಬಿಟ್ಟರು. ಹೊಟೇಲೊಳಗೆ ಬಂದಿರುವವರಿಗೆ ಹರ್ಷವರ್ಧನ ಕಾಣಸಿಗಲಿಲ್ಲವೆಂದಾಗ ಏನೋ ಕಳೆದುಕೊಂಡಂತಹ ನೋವು,ಅಸಮಾಧಾನ. ಆತ ಬಂದು ನಗೆ ಬೀರಿ ಕೈಯಲ್ಲಿ ವಿಶ್ ಮಾಡಿದರೆ ಎಲ್ಲಿಯೋ ಅಡಗಿದ್ದ ಸಂತೋಷ ಮತ್ತೆ ಆವರಿಸಿಕೊಳ್ಳುತ್ತದೆ.

ಹೊಟೇಲಿನ ಒಳಗೆ/ಹೊರಗಿನ ಕೆಲಸವನ್ನು ನಿಗಾ ಇಟ್ಟು ಕಲಿತ ಹರ್ಷವರ್ಧನ ಪಡಿವಾಳ್ ತಾನು ಬೇರೆಯೆ ಒಂದು ಹೊಟೇಲ್ ಪ್ರಾರಂಭಿಸಬೇಕೆನ್ನುವ ಆಸಕ್ತಿಯಲ್ಲಿ 2011ರಲ್ಲಿ “ನ್ಯೂ ಪಡಿವಾಳ್ಸ್ ರೆಸ್ಟಾರೆಂಟ್ “ ಪ್ರಾರಂಭಿಸಿದರು. ಅದು ಹಳೆಯ ಪಡಿವಾಳ್ಸ್ ಹೊಟೇಲ್ ಕಟ್ಟಡಕ್ಕಿಂತ ಐನೂರು ಮೀಟರುಗಳಷ್ಟು ಮುಂದಕ್ಕೆ. ಐಸಿಐಸಿಐ ಬ್ಯಾಂಕ್ ಶಾಖಾ ಕಛೇರಿಯ ಬಳಿಯಲ್ಲಿ.

ಎರಡು ಕಾರಣಗಳಿಗಾಗಿ “ನ್ಯೂ ಪಡಿವಾಳ್ಸ್ ಹೊಟೇಲ್ ರೆಸ್ಟಾರೆಂಟ್ “ ಭಾರೀ ಜನಪ್ರಿಯತೆ ಗಳಿಸತೊಡಗಿತು. ಹರ್ಷವರ್ಧನ್ ಅಲ್ಲಿರುವುದು ಎರಡನೆಯದು , ಬೇಯಿಸುವ ರುಚಿಯಾದ ತಿಂಡಿ ಅಡುಗೆ ಇತ್ಯಾದಿ. ಅಲ್ಲಿನ ಚಹ ಕುಡಿದಾಗ ಆಗುವ ಉತ್ಸಾಹ ಅದು ಅವರ್ಣನೀಯ! ಅದನ್ನು ಯಾವ ರೀತಿಯಲ್ಲಿ ತಯಾರಿಸುತ್ತೀರಿ ಎಂದು ನಾನು ಕೂಡ ಕೇಳಿದರೂ ಹೇಳುವುದಕ್ಕಿಲ್ಲ! ಎರಡು ಕಪ್ ಚಹ ಕುಡಿದರೂ ಇನ್ನೊಂದು ಕಪ್ ಕುಡಿಯುವುದಕ್ಕೂ ಬೇಡವಾಗಲು ಸಾಧ್ಯವಿಲ್ಲ.

ಹೊಟೇಲ್ ಉದ್ಯಮದ ಯಶಸ್ಸಿನ ಹಿಂದಿರುವ ಮುಖ್ಯ ವಿಷಯ ಏನೆಂದರೆ ಮಾಲಿಕನಿಗೆ ಎಲ್ಲ ಕೆಲಸ ತಿಳಿದಿರಬೇಕು,ಯಾವ ಕೆಲಸದವನಿಗೂ ಬದಲಿ ಕೆಲಸದವನಾಗಲು ಆಸಕ್ತಿ /ತಯಾರು ಇರಬೇಕು. ಹರ್ಷವರ್ಧನ ಪಡಿವಾಳ್ ಗಿರಾಕಿಗಳ ಟೇಬಲಿಗೆ ಕುಡಿಯುವ ನೀರು ತಂದಿಡುತ್ತಾರೆ. ಒಳಗೆ ಯಾವ ಕೆಲಸವನ್ನೂ ಮಾಡುತ್ತಾರೆ. ಸದಾ ನೆಗಾಡುವುದೇ ಆತನ ಮುಖ ಲಕ್ಷಣ. ಯಾವನೇ ಗ್ರಾಹಕನಿಗೂ ತನ್ನ ನಗು ತೋರಿಸದೆ ಬಾಕಿಯಿಡುವುದಿಲ್ಲ. ಯಾರೇ ಕೂಡ ಒಮ್ಮೆ ಆ ಹೊಟೇಲಿಗೆ ಬಂದವನು ಕ್ಷಣದಲ್ಲೇ ಹರ್ಷವರ್ಧನರ ಸ್ನೇಹಿತನಾಗಿಬಿಡುತ್ತಾನೆ! ವ್ಯಾಪಾರದ ಟ್ರಿಕ್ಸ್ ಅಲ್ಲ ಅದು, ಪ್ರಕಟಗೊಂಡು ವಿನಿಮಯಗೊಳ್ಳುವ ಪ್ರೀತಿಯ ಮನಸು! ಅದು ಹರ್ಷನವರಿಗೆ ಜನ್ಮತಃ ಬಂದಿರುವುದಾಗಿದೆ. ಆತ ವಯಸ್ಸಿನಲ್ಲಿ ನನಗೆ ಎಷ್ಟೋ ಚಿಕ್ಕವನು!
ಗ್ರಾಹಕನನ್ನು ಮಾತಾನಾಡಿಸಿದಾಗ ಲೋಕಜ್ಞಾನವೂ ದೊರೆಯುತ್ತದೆ, ಹೊಟೇಲೊಳಗೆ ಸಲ್ಲುವ ನಮಗೆ ಹೊರಗೆ ಸುತ್ತಾಡುವುದಕ್ಕೆ ಅವಕಾಶವಾದರೂ ಎಲ್ಲಿದೆ? ಎನ್ನುತ್ತಾರೆ ಹರ್ಷವರ್ಧನ್ ಪಡಿವಾಳ್.
ಇಡ್ಲಿ ಸಾಂಬಾರುನಿಂದ ಹಿಡಿದು ಗೋಳಿಬಜೆವರೆಗೂ ವಿಶೇಷವಾದ ರುಚಿಯಡಗೆದೆ. ಒಳಗೆ ಟೊಳ್ಳಾಗಿರುವ ಕರಕರ ಗೋಳಿಬಜೆ ಈ ಹೊಟೇಲಿನಲ್ಲಿ ಲಭ್ಯ.
ಸಾಮಾನ್ಯವಾಗಿ ಜನರು ತಿನ್ನಲು ಬಯಸುವ ಅನೇಕ ತಿಂಡಿಗಳನ್ನು ಸಮಯ ಮಿತಿಗೆ ಅನ್ವಯಿಸಿ ಮಾಡುವ ನಿಯಮವನ್ನು ಇಟ್ಟುಕೊಂಡಿದ್ದಾರೆ. ಪೂರ್ವಾಹ್ನದಲ್ಲಿ ಬೇಕಾಗುವ ಹಗುರವಾದ ತಿಂಡಿ ಯಾವುದೋ ಅದನ್ನೇ ಆವಾಗ ತಯಾರಿಸಲಾಗುತ್ತದೆ. ಸಂಜೆಯ ಸಮಯದ ತಿಂಡಿ ಯಾವುದಾಗಿರಬೇಕೋ ಅದುವೇ ಇರುತ್ತದೆ. ನಿಗದಿತ ಸಮಯಕ್ಕೆ ಮೊದಲೇ ಮಾಡಿ ಕೊಡುವ ರಾಜಿ ,ಅವಸರದ ಹೊಂದಾಣಿಕೆ ಇಲ್ಲವೇ ಇಲ್ಲ. “ನ್ಯೂ ಪಡಿವಾಳ್ಸ್ ರೆಸ್ಟಾರೆಂಟ್”ಗೆ ಯಾವ ಹೊತ್ತಿಗೆ ಹೋದರೆ ಯಾವುದು ತಿಂಡಿ ಎಂದು ಗ್ರಾಹಕರಿಗೆ ನ್ಯೂ ಪಡಿವಾಳ್ಸ್ ರೆಸ್ಟಾರೆಂಟಿನ ಶಿಸ್ತಿನ ಪಾಠ ಹೇಳಿದೆ!
ಮಿಥುನ್ ಕುಮಾರ್ ಕೂಡಾ ಅವರ ಜೊತೆಪಾಲುದಾರನಾಗಿ ದುಡಿಯುತ್ತಿದ್ದಾರೆ. ಅವರದೂ ವಿಶಾಲವಾದ ಸ್ನೇಹ ಕೂಟ. ಎಲ್ಲರೊಂದಿಗೂ ಬೆರೆಯುವುದು,ಮಾತು,ಕುಶಲೋಪರಿ ಇದ್ದೇ ಇದೆ. ಒಟ್ನಲ್ಲಿ ನ್ಯೂ ಪಡಿವಾಳ್ಸ್ ರೆಸ್ಟಾರೆಂಟಿನಲ್ವಿ ಒಮ್ಮೆ ಊಟ ಉಪಾಹಾರ ಸ್ವೀಕರಿಸಿ ರುಚಿಯನ್ನು ಆಸ್ವಾದಿಸಬೇಕು. ಮೂಡುಬಿದಿರೆ ಪೇಟೆಯಿಂದ ಮತ್ತು ವೇಣೂರು ಬಿಸಿರೋಡ್ ಕಡೆಯಿಂದ ಕಾರ್ಕಳ ದಾರಿಯಲ್ಲಿ ಮುಂದುವರಿದಾಗ ಕಡಿಮೆ ದೂರದಲ್ಲಿಯೇ ಬಲಕ್ಕೆ ಇದೆ ನ್ಯೂ ಪಡಿವಾಳ್ಸ್ ರೆಸ್ಟಾರೆಂಟ್,ಮೂಡಿಬಿದಿರೆ.
ಮೂಡುಬಿದಿರೆಗೆ ಬಂದಾಗ ಒಂದೊತ್ತಿನ ಉಟವೋ,ಉಪಾಹಾರಕ್ಕೋ ಅಲ್ಲಿಗೆ ಹೋಗಿ. ಹರ್ಷನವರ ಪಡಿವಾಳ್ಸ್ ಹೊಟೇಲ್ ಎಲ್ಲಿದೆ ಎಂದು ಯಾರಲ್ಲಿ ಕೇಳಿದರೂ ಅದು ಕಣ್ಣಿಗೆ ಕಾಣುವ ಹಾಗೆನೇ ಕೈ ಉದ್ದಮಾಡಿ ತೋರಿಸುತ್ತಾರೆ ಮೂಡುಬಿದಿರೆಯ ನಾಗರಿಕರು.
-ವಿ. ಕೆ. ವಾಲ್ಪಾಡಿ





































