ಬಸ್ ಸಾರಿಗೆ ಉದ್ಯಮಿ ಎಂ. ಕೆ. ರತ್ನಾಕರ್ ನಿಧನ

Picture of RB NEWS

RB NEWS

Bureau Report

ಸಾರಿಗೆ ಉದ್ಯಮಿ, ಎಂ. ಕೆ. ರತ್ನಾಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಕಳ ದಾನಶಾಲಾ ಬಳಿಯ ನಿವಾಸಿಯಾಗಿದ್ದ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದವರು. ನಿಧನ ಕಾಲಕ್ಕೆ ಅವರಿಗೆ 82 ವರ್ಷ ವಯಸ್ಸಾಗಿತ್ತು.
ಗ್ರಾಮ ಕರಣಿಕ ಉದ್ಯೋಗ ಮಾಡಿಕೊಂಡಿದ್ದ ಅವರು ನಂತರ ಸಾರಿಗೆ ಬಸ್ ಉದ್ಯಮವನ್ನು ಪ್ರಾರಂಭಿಸಿದರು.
ಎಂಭತ್ತರ ದಶಕದಲ್ಲಿ ಪ್ರಾರಂಭಿಸಿದ್ದ ಸರಳ ಮೋಟಾರ್ಸ್ ಬಸ್ ಸೇವೆಯು ಮುಂದೆ ವಿಸ್ತೃತವಾಗಿ ಬೆಳೆಯಿತು. ದರೆಗುಡ್ಡೆ,ಶಿರ್ತಾಡಿ ಮೂಡುಬಿದಿರೆ,ಇರ್ವತ್ತೂರು,ಕಾರ್ಕಳ ಮಾರ್ಗದಲ್ಲಿ ಮೊದಲ ಬಸ್ ಸೇವೆಯನ್ನು ಪ್ರಾರಂಭಿಸಿದ್ದ ಅವರು ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳ ಊರುಗಳಿಗೆ ಬಸ್ಸು ಸೇವೆ ಒದಗಿಸಿ ಜನಪ್ರೀತಿಯನ್ನು ಗಳಿಸಿದವರು.
ಸರಳ ಮೋಟಾರ್ಸ್ ಬಸ್ಸು ಓಡಾಟವಿಲ್ಲದ ಗ್ರಾಮಗಳೇ ಇಲ್ಲವೆನ್ನುವ ಮಟ್ಟಿಗೆ ಕಾರ್ಕಳ ಮತ್ತು ಮೂಡುಬಿದಿರೆ ಸುತ್ತಮುತ್ತಲಿನ ಹಳ್ಳಿ ಊರುಗಳಿಗೆ ಬಸ್ ಸೇವೆ ಒದಗಿಸಿದ್ದಾರೆ. ಸರಳ ಬಸ್ ಎನ್ನುವ ಹೆಸರು ಈಗಲೂ ಜನಮಾನಸವಾಗಿದೆ ಎನ್ನುವುದಕ್ಕೆ ಎರಡು ಮಾತಿಲ್ಲ. ಕೆಲವು ಮಾರ್ಗದ ಬಸ್ ಪರವಾನಗಿಯನ್ನು ಬೇರೆಯವರಿಗೆ ವರ್ಗಾಯಿಸಿದ್ದರಿಂದ ಹೊಸ ಹೆಸರಿನಲ್ಲಿ ಬಸ್ ಓಡಾಟ ಮಾಡುತ್ತಿದ್ದರೂ ಅದು ಸರಳ ಬಸ್ ಎಂತಲೇ ಹಳ್ಳಿಯ ಜನ ಈಗಲೂ ಅಂದುಕೊಳ್ಳುತ್ತಿದ್ದಾರೆ.

ಎಂ. ರತ್ನಾಕರ್ ಅವರು ಪ್ರಾರಂಭದಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕನಾಗಿ ಸೇವೆ ಸಲ್ಲಿಸಿರುತ್ತಾರೆ. ಮುಂದೆ ಅವರು ಸ್ವಯಂ ನಿವೃತ್ತಿಯನ್ನು ಪಡೆದುಕೊಂಡು ಬಸ್ ಸಾರಿಗೆ ಉದ್ಯಮದಲ್ಲಿ ತೊಡಗಿಕೊಂಡರು.
ಕಾರ್ಕಳದ ಜೈನ ಸಮಾಜ ಸೇವಾ ಚಟುವಟಿಕೆ ಸಹಿತ ತನ್ನ ಊರಿನ ಹಾಗೂ ಜಿಲ್ಲೆಗಳ ಜೈನ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ರೀತಿಯ ಸೇವೆಯನ್ನು,ಕೊಡುಗೆಯನ್ನು ನೀಡಿದ್ದಾರೆ. ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಈ ಹಿಂದಿನ ಸಂದರ್ಭಗಳಲ್ಲಿ ಶಕ್ತಿ ಮೀರಿ ದುಡಿಯುತ್ತಿದ್ದ ಅವರು ಇನ್ನೇನು ಮುಂದಿನ ಫೆಬ್ರುವರಿ ತಿಂಗಳಲ್ಲಿ ನಡೆಯಲಿರುವ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ದಿನಾಂಕ ಪ್ರಕಟಣೆಗೆ ಮುನ್ನವೇ ಇಹಲೋಕ ತ್ಯಜಿಸಿರುವುದು ದುಃಖಕರ ಸಂಗತಿಯಾಗಿದೆ.
ಎಂ. ಕೆ. ರತ್ನಾಕರ್ ಅವರ ನಿಧನಕ್ಕೆ ಕಾರ್ಕಳದ ಡಾ।ಎಂ. ಎನ್.ರಾಜೇಂದ್ರ ಕುಮಾರ್ ಸಹಿತ ಅನೇಕ ಜೈನ ಮುಖಂಡರುಗಳು ಹಾಗೂ ಸಮಸ್ತ ಜೈನ ಸಮಾಜ ಬಂಧುಗಳೊಲ್ಲರೂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಾಸಕ ವಿ. ಸುನಿಲ್ ಕುಮಾರ್, ಕಾಂಗ್ರೆಸ್ ಪಕ್ಷದ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಹಿತ ಅನೇಕ ಮಂದಿ ಸಾಮಾಜಿಕ ಮುಖಂಡರುಗಳು ರತ್ನಾಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದಾರೆ.
ಮೃತರು ಪುತ್ರಿ ಸರಳ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಹುಟ್ಚೂರಾದ ಮರೋಡಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿರುತ್ತದೆ.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top