ಬಸವಣ್ಣನವರು ನುಡಿದ ಏಳು ಬೇಡಗಳನ್ನು ಪಾಲಿಸಿದರೆ ಅಂತರಂಗ, ಬಹಿರಂಗ, ಇಡೀ ಸಮಾಜ ಶುದ್ಧಗೊಳ್ಳಲು ಸಾಧ್ಯ
-ರಾಜ್ಯಪಾಲ, ದೇಶದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್
ಮೂಡುಬಿದಿರೆ: ದೇಶದಲ್ಲಿ ಐದು ಕೋಟಿಗೂ ಹೆಚ್ಚು ವ್ಯಾಜ್ಯಗಳು ಬಾಕಿ ಉಳಿದಿದೆ. ಉತ್ತರ ಭಾರತದಲ್ಲಿ ಕ್ರಿಮಿನಲ್ ವ್ಯಾಜ್ಯಗಳು ಹೆಚ್ಚಾಗಿದ್ದು ದಕ್ಷಿಣ ಭಾರತದಲ್ಲಿ ಸಿವಿಲ್ ವ್ಯಾಜ್ಯಗಳು ಹೆಚ್ಚಾಗಿವೆ. ಪ್ರತಿಯೊಬ್ಬ ಮನುಷ್ಯನು ಬಸವಣ್ಣನವರ ಹೇಳಿದ ಕಳಬೇಡ, ಕೊಲಬೇಡ, ಮುನಿಯಬೇಡ ಇದಿರ ಹಳಿಯ ಬೇಡ ,ಇತ್ಯಾದಿ ಏಳು ಬೇಡಗಳನ್ನು ಶಿರಸಾವಹಿಸಿ ಅಂತರಂಗ ಬಹಿರಂಗಗಳಲ್ಲಿ ಅಳವಡಿಸಿಕೊಂಡರೆ ಎಲ್ಲ ರೀತಿಯ ವ್ಯಾಜ್ಯಗಳಿಂದ ಭಾರತ ದೇಶದ ಜನರು ಮುಕ್ತಗೊಳ್ಳಲು ಸಾಧ್ಯವಿದೆ. ದೇಶದಲ್ಲಿರುವ ಗಂಡಿರಲಿ ಹೆಣ್ಣಿರಲಿ ಎಲ್ಲರಿಗೂ ಸರಿಸಮಾನವಾದ ಅವಕಾಶ ಕಾನೂನಿನ ಅಡಿಯಲ್ಲಿ ಇದೆ. ಅವಿಭಕ್ತ ಕುಟುಂಬದ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದಲ್ಲಿ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಹಾಗೂ ಕಾನೂನಾತ್ಮಕವಾಗಿ ಸಮರ್ಪಕವಾಗಿ ಜಾರಿಗೊಳ್ಳಲು ಸಾಧ್ಯವಿದೆ. ಪ್ರಪಂಚದ ಎಲ್ಲ ನೇತಾರರು ಕಾನೂನಿನ ಹಿನ್ನೆಲೆಯಿಂದಲೇ ಬಂದವರು. ಹೀಗಾಗಿ ವಿದ್ಯೆ ರಹಿತವಾದಂತಹ ಯಾವುದೂ ಈ ಪ್ರಪಂಚದಲ್ಲಿ ಅಭಿವೃದ್ಧಿಗೆ ದಾರಿ ಮಾಡುವುದಿಲ್ಲ. ಇಂದಿನ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ಗಳು, ಉಪಕರಣಗಳು ಎಲ್ಲವೂ ಕಾನೂನಿಗೆ ಪೂರಕವಾದ ವಿಷಯಗಳನ್ನು ಮಾಹಿತಿಗಳನ್ನು ನೀಡಿ ಉಪಕರಿಸುತ್ತಿದ್ದಾವೆ. ಹೀಗಾಗಿ ನ್ಯಾಯಾಧೀಶರು ಸಮರ್ಪಕವಾಗಿ ನ್ಯಾಯವನ್ನು ನೀಡಲು ಅವೆಲ್ಲವೂ ಪೂರಕವಾಗಿವೆ. ನ್ಯಾಯವಾದಿ ಎಲ್ಲವನ್ನು ತಿಳಿದು, ಅರ್ಥೈಸಿಕೊಂಡು, ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಸದಾ ಪ್ರಯತ್ನಿಸುತ್ತಿರಬೇಕು ಅದಕ್ಕಾಗಿ ಹೆಚ್ಚಿನ ತಿಳುವಳಿಕೆಯನ್ನು ಪಡೆಯಲು ಸದಾ ಜ್ಞಾನ ಪಿಪಾಸು ಆಗಿರಬೇಕಾಗುತ್ತದೆ ಎಂದು ಅಂಧ್ರ ಪ್ರದೇಶದ ರಾಜ್ಯಪಾಲ, ದೇಶದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಬೆಳುವಾಯಿ ಎಸ್ ಅಬ್ದುಲ್ ನಜೀರ್ ಹೇಳಿದರು.




ಮೂಡುಬಿದಿರೆ ಸಮೀಪದ ಶಿರ್ತಾಡಿ ಭುವನ ಜ್ಯೋತಿ ವಿದ್ಯಾಸಂಸ್ಥೆಯವರ ಕಾನೂನು ವಿದ್ಯಾಲಯದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರ ಮಾತನಾಡಿದರು.
ಕರ್ನಾಟಕ ರಾಜ್ಯ ಮುಖ್ಯ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣ ಎಸ್ ದೀಕ್ಷಿತ್ ಮಾತನಾಡಿ ಶಾಂತಿ, ಜ್ಞಾನಪ್ರಿಯ ರಾಷ್ಟ್ರ ಭಾರತವಾದುದರಿಂದಲೇ ಮಹಮ್ಮದ್ ಇಕ್ಬಾಲ್ ಅವರು ತಮ್ಮ ಕಾವ್ಯದಲ್ಲಿ “ಸಾರೆ ಜಹಾಂಸೆ ಅಚ್ಛಾ” ಎಂದು ಹಾಡಿ ಕುಣಿದಿದ್ದಾರೆ. ಜ್ಞಾನ ಸಜೀವ ನದಿಯಾಗಿ ಈ ದೇಶದಲ್ಲಿ ಹರಿಯುತ್ತಿರುವುದರಿಂದಾಗಿ ಸಂವಿಧಾನದ ರಚನೆ ಸದೃಢವಾಗಿ ಜ್ಞಾನವೇತ್ತ ರೀತಿಯಲ್ಲಿ ಜ್ಞಾನಮಾರ್ಗದಲ್ಲಿ ಎಲ್ಲವನ್ನು ಈ ದೇಶದಲ್ಲಿ ನಡೆಸುತ್ತಿದೆ. ಕಾನೂನು ಮನೆಯಿಂದಲೇ ಪ್ರಾರಂಭವಾಗಬೇಕು ಹಾಗಾದರೆ ಮಾತ್ರ ಎಲ್ಲವೂ ಸಮರ್ಪಕವಾಗಿ ನಡೆಯುವುದಕ್ಕೆ ಸಾಧ್ಯವಿದೆ. ಸಾಕ್ರೆಟೀಸ್ ಹೇಳಿದಂತೆ ಶಿಕ್ಷಣವನ್ನು ಅರಸಿಕೊಂಡು ಹೋಗು, ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆದು ಅಭಿವೃದ್ಧಿ ಮಾಡಲು ಪ್ರಯತ್ನಿಸು ಎಂದು ತಿಳಿಸಿದಂತೆ ಪ್ರತಿಯೊಂದು ಹಳ್ಳಿಗಳಲ್ಲಿ ಕಾನೂನು ಶಿಕ್ಷಣ ಅಭಿವೃದ್ಧಿಯಾಗಿ ಪ್ರತಿಯೊಬ್ಬರು ಕಾನೂನಿನ ತಿಳುವಳಿಕೆಯನ್ನು ಪಡೆದಾಗ ಮಾತ್ರ ಜ್ಞಾನದ ಬೆಳಕು ವಿಸ್ತಾರವಾಗಿ ಇಡೀ ದೇಶಕ್ಕೆ ಪಸರಿಸಲು ಸಾಧ್ಯವಿದೆ ಎಂದರು.
ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯದ ಉಪಕುಲಪತಿ ಡಾ. ಸಿ ಬಸವರಾಜು ಮಾತನಾಡಿ ಕಡಿಮೆ ಕಲಿಕೆ ಅನರ್ಥಕ್ಕೆ ದಾರಿ ಮಾಡುತ್ತದೆ ಆದುದರಿಂದ ಸಮಾಜದ ಮೌಲ್ಯಗಳನ್ನುಹೆಚ್ಚಿಸಲು ಸದೃಢ ಕಲಿಕೆ ಪ್ರತಿಯೊಬ್ಬರಿಗೂ ಅಗತ್ಯವಿದೆ. ಪ್ರತಿಯೊಬ್ಬ ನ್ಯಾಯವಾದಿಯು ತಾನಿರುವ ಪರಿಸರದ ಎಲ್ಲರನ್ನು, ಎಲ್ಲರಲ್ಲೂ ಕಾನೂನಿನ ತಿಳುವಳಿಕೆಯನ್ನು ಮೂಡಿಸಿ ನಂಬಿಕಸ್ಥನಾಗಿದ್ದು ಹೃದಯ ಶ್ರೀಮಂತಿಕೆಯಿಂದ ಎಲ್ಲರನ್ನು ಬೆಳೆಸುವ ಪ್ರತಿಜ್ಞೆಯನ್ನು ಮಾಡಿದರೆ ಇಡೀ ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಿದೆ. ಬಡವ-ಬಲ್ಲಿದ, ಮೇಲು-ಕೀಳು ಎಂಬ ಎಲ್ಲ ರೀತಿಯ ಭೇದ ಭಾವಗಳು ದೂರವಾಗಿ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ಸಮಾಜದ ಅಭಿವೃದ್ಧಿಯಾಗುವುದಕ್ಕೆ ಸಾಧ್ಯವಾಗುತ್ತದೆ. ಈ ಕೆಲಸ ಮಾಡಬೇಕಾದವರು ಸ್ವತಹ ನ್ಯಾಯವಾದಿಗಳು. ಸಹೋದರತೆಯಿಂದ ಎಲ್ಲರನ್ನು ಕಂಡು ಸಮಸ್ಯೆಗಳನ್ನು ತಾವೇ ಬಗೆ ಹರಿಸುವ ಪ್ರಯತ್ನಕ್ಕೆ ಇಳಿಯಬೇಕು ಎಂದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನ ಚೇರ್ಮನ್ ವಿಶಾಲ್ ರಘು ಎಚ್ ಎಲ್ ಮಾತನಾಡಿ ಕೇವಲ ಐದು ಮಂದಿ ವಿದ್ಯಾವಂತರು ಸೇರಿ ಕಟ್ಟಿದ ಈ ಭುವನ ಜ್ಯೋತಿ ಸಂಸ್ಥೆ ಭವನಕ್ಕೆ ಜ್ಯೋತಿಯಾಗಿ ಬೆಳಗುವಂತಹ ಕಾನೂನು ವಿದ್ಯಾಲಯವನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿ ಮುಂದುವರೆಯುತ್ತಿರುವುದು ಬಹಳ ಉತ್ತಮ ಬೆಳವಣಿಗೆ. ಶಿರ, ಹಸ್ತ, ಹೃದಯ ಗಳನ್ನು ಸೇರಿ ವಿದ್ಯೆ ಮುಂದುವರಿದರೆ ಅಭಿವೃದ್ಧಿ ಶತಸಿದ್ಧ ಎಂದು ಇವರು ತೋರಿಸಿಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನ ಚೇರ್ಮನ್ ವಿಶಾಲ್ ರಘು ಎಚ್ ಎಲ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ನ್ಯಾಯಾಧೀಶ ರವೀಂದ್ರ ಎಂ ಜೋಶಿ ಅವರ ಮಾತನಾಡಿ ನ್ಯಾಯವಾದಿಗಳು ಎಲ್ಲವನ್ನು ಅರ್ಥೈಸಿಕೊಂಡು ಜ್ಞಾನದ ಅರಿವನ್ನು ಹೆಚ್ಚಿಸಿಕೊಂಡು ಬೆಳವಣಿಗೆಯಾದಲ್ಲಿ ಮಾತ್ರ ಕಾನೂನು ಉತ್ತಮ ರೀತಿಯಲ್ಲಿ ಜಾರಿಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿ ಹೇಳಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಪ್ರಭು ಹಾಜರಿದ್ದರು. ಕಾನೂನು ವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರದೀಪ್ ಎಂ ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಪ್ರಶಾಂತ್ ಎನ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಪ್ರಶಾಂತ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.
ಫೋಟೋ ವರದಿ: ರಾಯಿ ರಾಜ ಕುಮಾರ, ಮೂಡುಬಿದಿರೆ































