ಬಸದಿಯ ಆಡಳಿತ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಅಡ್ಡಿ ಪಡಿಸದಂತೆ ನಿರ್ಬಂಧಿಸಿ ತಡೆಯಾಜ್ಞೆ
ಕಾರ್ಕಳ : ಬೋಳ ಬಸದಿಯ ಆಡಳಿತ ಮತ್ತು ಜೀರ್ಣೋದ್ಧಾರ ಕಾರ್ಯಕ್ಕೆ ಅಡ್ಡಿ ಪಡಿಸದಂತೆ ಬೋಳ ಬಸದಿಯ ಅರ್ಚಕ ಹಾಗೂ ಅವರ ಮಗನಿಗೆ ಕಾರ್ಕಳ ನ್ಯಾಯಾಲಯವು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ.
ಪುರಾತನವಾಗಿರುವ ಬೋಳ ಶ್ರೀ ವರ್ಧಮಾನ ಸ್ವಾಮಿ ಬಸದಿಯ ಆಡಳಿತಗಾರರಾದ ಪ್ರವೀಣ್ ಕುಮಾರ್ ಅಗರಿ, ಸತೀಶ್ ಅಗರಿ ಮತ್ತು ನಿಧಿ ಮಿಥುನ್ ಅವರು ತಮ್ಮ ಕುಟುಂಬದ ಆಡಳಿತಲ್ಲಿ ಇರುವ ಬೋಳ ಶ್ರೀ ವರ್ಧಮಾನ ಬಸದಿಯ ಜೀರ್ಣೋದ್ಧಾರಕ್ಕೆ ಕೆಲಸಕ್ಕೆ ಅಲ್ಲಿಂದ ಅರ್ಚಕ ಹಾಗೂ ಅವರ ಮಗ ಅಡಿ ಮಾಡುತ್ತಿದ್ದರೆಂದು ಆರೋಪಿಸಿ ನ್ಯಾಯಾಲಯದ ಮೆಟ್ಟಲೇರಿದ್ದರು.
ಬಸದಿಯ ಜೀರ್ಣೋದ್ಧಾರಕ್ಕೆಂದು ಹೇಳಿ ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಿ ಧನ ಸಂಗ್ರಹಿಸುತ್ತಿದ್ದ ಬಸದಿಯ ಅರ್ಚಕ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಅವರುಗಳ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. (ಅಸಲು ದಾವೆ ಸಂಖ್ಯೆ ೭೩/೨೦೨೪)

ಕಾರ್ಕಳದ ಹಿರಿಯ ನ್ಯಾಯಾಲಯವು 2024 ಸೆ. ೧೨/೦೯/೨೪ ರಂದು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಅದರಲ್ಲಿ ಉಲ್ಲೇಖಿಸಿದಂತೆ ಬೋಳ ಬಸದಿಯ ಅರ್ಚಕ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಇವರನ್ನು ಬಸದಿಯ ನಿರ್ವಹಣೆ, ಆಡಳಿತ ಮತ್ತು ಜೀರ್ಣೋದ್ಧಾರದ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದನ್ನು ಅಥವಾ ಮಧ್ಯಪ್ರವೇಶಿಸುವುದನ್ನು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ.
ಬ್ಯಾನರ್‌ಗಳ, ಇತರ ಮಾಧ್ಯಮಗಳಲ್ಲಿ ಬೋಳ ಶ್ರೀ ವರ್ಧಮಾನಸ್ವಾಮಿಯ ಬಸದಿಯ ಹೆಸರಿನಲ್ಲಿ ಅಥವಾ ಅದರ ನವೀಕರಣಕ್ಕಾಗಿ ಹಣವನ್ನು ಸಂಗ್ರಹಿಸುವುದರಿಂದ ಅಥವಾ ಕೋರುವುದರಿಂದ ನಿರ್ಬಂಧಿಸಿದೆ.




































