ಕಾರ್ಕಳ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್, ಕರ್ನಾಟಕವನ್ನು ಒಳಗೊಂಡಂತೆ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಐಟಿ ಕ್ಷೇತ್ರದ ನವೀನತೆ, ಪ್ರವಾಸೋದ್ಯಮ ವಿಸ್ತರಣೆ, ಒಳನಾಡು ಜಲ ಸಂಪರ್ಕ, ಹೈ–ಸ್ಪೀಡ್ ರೈಲು ಯೋಜನೆಗಳು, ಎಂಎಸ್ಎಂಇಗಳು ಹಾಗೂ ಸೇವಾ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಿರ್ಮಾಣಕ್ಕೆ ಈ ಬಜೆಟ್ ದೃಢವಾದ ನೆಲೆಯನ್ನು ಹಾಕಿದೆ ಎಂದು ಅವರು ಹೇಳಿದರು. ಅರ್ಥವ್ಯವಸ್ಥೆಯ ಸೂಕ್ಷ್ಮ ಅಂಶಗಳಿಗೆ ಆದ್ಯತೆ ನೀಡುವ ಮೂಲಕ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಎಂಎಸ್ಎಂಇ, ಮೂಲಸೌಕರ್ಯ ಹಾಗೂ ಆರ್ಥಿಕ ಕಾರಿಡಾರ್ಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಜೊತೆಗೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿರುವುದು ಈ ಬಜೆಟ್ನ ಮತ್ತೊಂದು ಪ್ರಮುಖ ಅಂಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಹವಾಮಾನ ವೈಪರೀತ್ಯದಂತಹ ಸವಾಲುಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿರುವುದಕ್ಕೆ ಈ ಬಜೆಟ್ ಸ್ಪಷ್ಟ ಉದಾಹರಣೆಯಾಗಿದೆ. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನಾಗಿ ರೂಪಿಸುವಲ್ಲಿ ಈ ಬಜೆಟ್ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.