ಬಂಟ್ವಾಳದಲ್ಲಿ ಎಂಡಿಎಂಎ ಸಾಗಾಟ ಪತ್ತೆ: ಮೂವರು ಆರೋಪಿಗಳ ವಶ, ₹7.64 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಕೆ
RB NEWS
Bureau Report
ಬಂಟ್ವಾಳದಲ್ಲಿ ಎಂಡಿಎಂಎ ಸಾಗಾಟ ಪತ್ತೆ: ಮೂವರು ಆರೋಪಿಗಳ ವಶ, ₹7.64 ಲಕ್ಷ ಮೌಲ್ಯದ ಮಾದಕವಸ್ತು ವಶಪಡಿಕೆ
ಬಂಟ್ವಾಳ, ಜೂನ್ 6: ಕಾರಿನಲ್ಲಿ ಎಂಡಿಎಂಎ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು, ಅಂದಾಜು ₹7,64,000 ಮೌಲ್ಯದ 76 ಗ್ರಾಂ 40 ಮಿಲಿಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಆರೋಪಿಗಳನ್ನು ಬಂಟ್ವಾಳ ಪುದು ನಿವಾಸಿ ಎ. ಜುಬೈರ್ (39), ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಂಟ್ವಾಳ ಬಿ. ಮೂಡ ನಿವಾಸಿ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಡಿಎಂಎ ಮಾದಕವಸ್ತು, ಮಾದಕ ವಸ್ತು ಸೇವನೆಗೆ ಬಳಸುವ ಸಾಧನ, ಮೂರು ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ವಿವರ ಜೂನ್ 4ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಠಾಣಾ ಸಿಬ್ಬಂದಿಯೊಂದಿಗೆ ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದರು. ಕಾರಿನಲ್ಲಿ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರು ಇದ್ದರು. ತಪಾಸಣೆ ವೇಳೆ ಮನೋದ್ರೇಕಕಾರಿ ವಸ್ತು ಸೇವನೆಗೆ ಬಳಸುವ ಸಾಧನ ಪತ್ತೆಯಾಗಿದ್ದು, ನಂತರ ನಡೆಸಿದ ವಿಚಾರಣೆಯಲ್ಲಿ ಆರೋಪಿಗಳು ಎಂಡಿಎಂಎ ಮಾದಕವಸ್ತುವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಕಾರು ಹಾಗೂ ಆರೋಪಿಗಳ ತಪಾಸಣೆ ನಡೆಸಿದಾಗ ಎಂಡಿಎಂಎ ಮಾದಕವಸ್ತು ಮತ್ತು ಅದನ್ನು ಸೇವಿಸಲು ಬಳಸುವ ಸಾಧನಗಳು ಪತ್ತೆಯಾಗಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.