

ಫೆ. 8ರಂದು ಉಪ್ಪೂರಿನಲ್ಲಿ
ವಯೋವಂದನ ಆತಿಥ್ಯ ಗೃಹ ಶಂಕುಸ್ಥಾಪನೆ – ಭೂಮಿಪೂಜೆ

ಉಡುಪಿ: ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ “ವಯೋವಂದನ ಆತಿಥ್ಯ ಗೃಹ” ಕಟ್ಟಡದ ಶಂಕುಸ್ಥಾಪನೆ ಹಾಗೂ ಭೂಮಿಪೂಜೆ ಕಾರ್ಯಕ್ರಮವು ಪರಮಪೂಜ್ಯ ಶ್ರೀ ಕಾಶೀ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ನಕ್ಷತ್ರವಾದ ಸ್ವಾತಿ ನಕ್ಷತ್ರದಂದು, ಫೆಬ್ರವರಿ 8 (ಆದಿತ್ಯವಾರ) ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದಲ್ಲಿ ನಡೆಯಲಿದೆ.
ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಈ ಯೋಜನೆ, ಆರ್ಥಿಕವಾಗಿ ದುರ್ಬಲ ಹಾಗೂ ಆರೈಕೆ ಇಲ್ಲದ ಹಿರಿಯ ನಾಗರಿಕರಿಗೆ ಗೌರವಯುತ ಜೀವನ ಒದಗಿಸುವ ಉದ್ದೇಶ ಹೊಂದಿದೆ.
ಈಗಾಗಲೇ ವೇದಿಕೆಯ ವತಿಯಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿನ ಸುಮಾರು 192 ಆರ್ಥಿಕ ಸಂಕಷ್ಟದ ಕುಟುಂಬಗಳಿಗೆ ಪ್ರತಿ ತಿಂಗಳು ₹1,000 ರಿಂದ ₹2,500 ರವರೆಗೆ ಕುಟುಂಬ ಚೈತನ್ಯ ನಿಧಿ ಮೂಲಕ ನೆರವು ನೀಡಲಾಗುತ್ತಿದೆ. ಯೋಜನೆಯ ದಶಮಾನೋತ್ಸವ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿದಾಗ, ಸುಮಾರು 16 ಕುಟುಂಬಗಳು ವಾಸ್ತವ್ಯಕ್ಕೂ ಆಸರೆಯಿಲ್ಲದ ಸ್ಥಿತಿಯಲ್ಲಿ ಇರುವ ದುಃಖಕರ ಪರಿಸ್ಥಿತಿ ಬೆಳಕಿಗೆ ಬಂದಿದ್ದು, ಇದರಿಂದಲೇ “ವಯೋವಂದನ ಆತಿಥ್ಯ ಗೃಹ” ಯೋಜನೆಯ ಚಿಂತನೆ ಮೂಡಿಬಂದಿದೆ.
ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಸಿದ 1.11 ಎಕರೆ ಜಾಗದಲ್ಲಿ ಸುಮಾರು 50,000 ಚದರ ಅಡಿ ನಿರ್ಮಾಣದ ಕಟ್ಟಡ ನಿರ್ಮಾಣವಾಗಲಿದೆ. ನೆಲ ಮಹಡಿಯಲ್ಲಿ ಅಡುಗೆ ಮನೆ, ಡೈನಿಂಗ್ ಹಾಲ್, ದೇವರ ಕೋಣೆ, ಪ್ರಾರ್ಥನಾ ಸಭಾಗೃಹ, ಪಾರ್ಕಿಂಗ್, ಭದ್ರತಾ ಕೊಠಡಿ, ಲಾಂಡ್ರಿ ಹಾಗೂ ನಡಿಗೆ ಪಥಗಳಿರಲಿವೆ. ನೆಲ ಮಹಡಿ ಮತ್ತು ಮೇಲಿನ ಎರಡು ಮಹಡಿಗಳಲ್ಲಿ ತಲಾ 275 ಚದರ ಅಡಿ ವಿಸ್ತೀರ್ಣದ 24 ಕೊಠಡಿಗಳಂತೆ ಒಟ್ಟು 72 ವಾಸ ಕೋಣೆಗಳು ನಿರ್ಮಾಣವಾಗಲಿವೆ.
ನಿಯಮಿತ ಆರೋಗ್ಯ ತಪಾಸಣೆ, ತುರ್ತು ವೈದ್ಯಕೀಯ ಸೌಲಭ್ಯ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ಹಿರಿಯರ ಜೀವನೋತ್ಸಾಹ ಹೆಚ್ಚಿಸುವ ವಿವಿಧ ಚಟುವಟಿಕೆಗಳೊಂದಿಗೆ ಯೋಜನೆಯನ್ನು ರೂಪಿಸಲಾಗಿದೆ.
ಈ ಆತಿಥ್ಯ ಗೃಹದಲ್ಲಿ
ಮಕ್ಕಳಿಲ್ಲದ ಹಾಗೂ ಆರೈಕೆ ಮಾಡುವವರಿಲ್ಲದ ಆರ್ಥಿಕವಾಗಿ ದುರ್ಬಲ ಜಿಎಸ್ಬಿ ಸಮಾಜದ ಹಿರಿಯರಿಗೆ ಉಚಿತ ವಾಸ್ತವ್ಯ ನೀಡಲಾಗುವುದು. ಆರ್ಥಿಕವಾಗಿ ಸದೃಢರಾಗಿರುವ ಮಕ್ಕಳಿಲ್ಲದ ಹಿರಿಯರಿಗೆ ನಿಗದಿತ ಶುಲ್ಕದೊಂದಿಗೆ ವಿವಿಧ ಪ್ರವೇಶ ಆಯ್ಕೆಗಳು ಲಭ್ಯವಿರುತ್ತವೆ. ಜೊತೆಗೆ, ಮಕ್ಕಳು ವಿದೇಶ ಅಥವಾ ದೂರದ ಊರಿಗೆ ತೆರಳುವ ಸಂದರ್ಭಗಳಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆಯೂ ಯೋಜನೆಯಲ್ಲಿ ಒಳಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ, ಕೋಟ ಹಾಗೂ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅವರು, ಸಮಾಜದಲ್ಲಿ ಕಾಣಿಸಿಕೊಳ್ಳದಷ್ಟು ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ನೀಡುವುದೇ ವೇದಿಕೆಯ ಮೂಲ ಉದ್ದೇಶ ಎಂದರು.
ದಾನಿಗಳ ಕೊಡುಗೆಗಳ ಬಳಕೆಯನ್ನು ಸಂಪೂರ್ಣ ಪಾರದರ್ಶಕವಾಗಿ ವಿವರಿಸಿ ದಾನಿಗಳಿಗೆ ಮಾಹಿತಿ ನೀಡಲಾಗುವುದರಿಂದ, ಸಮಾಜದಲ್ಲಿ ಸಂಘಟನೆಯ ಮೇಲಿನ ವಿಶ್ವಾಸ ಹೆಚ್ಚಲಿದೆ ಎಂದು ಅವರು ತಿಳಿಸಿದರು.

7




































