

ಫೆ.12 ಮಹಾ ಮುಷ್ಕರಕ್ಕೆ ಬೆಂಬಲ: ಹಳೆ ಬಂದರು ಹಮಾಲಿ ಕಾರ್ಮಿಕರ ಸಭೆ
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಫೆಬ್ರವರಿ 12ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಕಾರ್ಮಿಕರ ಮುಷ್ಕರಕ್ಕೆ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಇಂದು ಹಳೆ ಬಂದರಿನ ಕಾರ್ಮಿಕರ ಕಟ್ಟೆ ಬಳಿ ಕಾರ್ಮಿಕರ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿ ಕಾರ್ಮಿಕರ ಹಿತ ಕಾಯುವ ಕಾನೂನುಗಳನ್ನು ಶೈತ್ಯಾಗಾರದಲ್ಲಿ ಇಟ್ಟಂತಾಗಿದೆ. ಕಾರ್ಮಿಕರ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸಲಾಗುತ್ತಿದ್ದು, ದೇಶದ ದುಡಿಯುವ ಜನರು ಒಂದಾಗಿ ಈ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಕೇಂದ್ರವನ್ನು ಆಳುತ್ತಿರುವ ನರೇಂದ್ರ ಮೋದಿ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಫಾರೂಕ್ ಉಳ್ಳಾಲಬೈಲ್, ಖಜಾಂಜಿ ಶಮೀರ್ ಬೋಳಿಯಾರ್, ಪ್ರಮುಖರಾದ ಮಜೀದ್ ಉಳ್ಳಾಲಬೈಲ್, ಮೋಹನ್ ಕುಂಪಲ, ಅನಿಲ್, ಪದ್ಮನಾಭ, ಸಿದ್ದಿಕ್ ಬೆಂಗ್ರೆ, ಸಿರಾಜ್, ಶರಣಪ್ಪ, ಬಷೀರ್ ಪಾವೂರ್ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.


ಫೆ.12 ಹಳೆ ಬಂದರು ಸಗಟು ಮಾರುಕಟ್ಟೆ ಬಂದ್
ಅಖಿಲ ಭಾರತ ಕಾರ್ಮಿಕರ ಮಹಾ ಮುಷ್ಕರಕ್ಕೆ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಸಂಪೂರ್ಣ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 12ರಂದು ಮಾರುಕಟ್ಟೆಯಲ್ಲಿ ಯಾವುದೇ ಲೋಡಿಂಗ್ ಹಾಗೂ ಅನ್ಲೋಡಿಂಗ್ ಕಾರ್ಯ ನಡೆಯುವುದಿಲ್ಲ. ಇದರಿಂದ ಸಗಟು ಮಾರುಕಟ್ಟೆಯ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಲಾರಿ, ಟೆಂಪೋ ಮಾಲಕರು, ಬಂದರಿನ ವರ್ತಕರು ಹಾಗೂ ಗ್ರಾಹಕರು ಮುಷ್ಕರಕ್ಕೆ ಸಹಕರಿಸುವಂತೆ ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮನವಿ ಮಾಡಿದ್ದಾರೆ.































