ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮ
ಕಾರ್ಕಳ: ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು
ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ
ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್
ನ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ ಹೇಳಿದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಕೆಸರುಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಶು ವೈದ್ಯ ಸಾಣೂರಿನ ಜ್ಞಾನದೇವ ಅವರು, ಜಗತ್ತೇ
ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು ಅಗತ್ಯ ಸಂಪೂರ್ಣ ಸಾವಯವ ಪ್ರಧಾನವಾದ
ಕೃಷಿ ನಡೆಸುವುದಾಗಿದೆ. ಕೃಷಿ ಕಷ್ಟಕರವಾದರೂ ಅದನ್ನು ಇಷ್ಟಪಟ್ಟು ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಶ್ವಥ್ ಎಸ್ ಎಲ್
ಮಾತನಾಡಿ, ಕೃಷಿ ಮೂಲವೇ ನಾಗರಿಕತೆಯ ಮೂಲ. ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ. ಆಹಾರ ಪದ್ಧತಿ
ಕೆಟ್ಟು ಹಿಂದಿನವರ ಆಹಾರ ಕ್ರಮ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ ಎಂದರು.

ಸಹ ಸಂಸ್ಥಾಪಕ ಡಾ.ಬಿ. ಗಣನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ
ವಿದ್ಯಾರ್ಥಿಗಳಿಗೆ ಜೀವನ ಕಲಿಕೆಯನ್ನು ರೂಢಿಸಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಬದುಕಿನ ಪಾಠ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳು
ಮಣ್ಣಿನ ಮಕ್ಕಳಾಗಬೇಕೆಂದರು.
ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಕೃಷಿಕರಾದ ದಿನೇಶ್ ನಾಯಕ್ ಮತ್ತು ವಸಂತ ಪೂಜಾರಿ ಇವರನ್ನು
ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು. ಸಭಾ ಕಾರ್ಯಕ್ರಮದ ನಂತರ
ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪನ್ಯಾಸಕ ವರ್ಗದವರು,
ಊರ ಗಣ್ಯರು ಭಾಗವಹಿಸಿದ್ದರು.
ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ನಿರೂಪಿಸಿದರು. ಎನ್ ಎಸ್ ಎಸ್. ಯೋಜನಾಧಿಕಾರಿ ಉಮೇಶ್ ವಂದಿಸಿದರು.
ಸಮಾರೋಪ ಸಮಾರಂಭ
ಹಸಿರೊಡನೆ ಕಲಿಕೆಯ ಕಲರವ ಕ್ರಿಯೇಟಿವ್ ಕೆಸರ್ಡೊಂಜಿ ದಿನ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಸಂಪನ್ಮೂಲ
ವ್ಯಕ್ತಿಗಳಾಗಿ ಆಗಮಿಸಿದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್
ಸೊಸೈಟಿ ಜೋಡುರಸ್ತೆ, ಕಾರ್ಕಳ ಇಲ್ಲಿನ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಮುನಿಯಾಲು ರವರು ಮಾತನಾಡಿ ಕೃಷಿ ನಮ್ಮ ಮೂಲ ಸಂಸ್ಕೃತಿ ಎಂದು ತಿಳಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಕೆ ಯೋಗೀಶ್ ಕಿಣಿ, ಮುಖ್ಯೋಪಾಧ್ಯಾಯರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಲಾಯಿ ಬಾಕ್ಯಾರು, ತೆಳ್ಳಾರು ಇವರು ಕ್ರಿಯೇಟಿವ್ ಕಾಲೇಜಿನ
ಸೃಜನಾತ್ಮಕ ಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕೃಷಿಯ ಮಹತ್ವವನ್ನು ಕುರಿತು
ತಿಳಿಸಿಕೊಟ್ಟರು.
ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ, ಆದರ್ಶ ಎಂ. ಕೆ ರವರು
ಉಪಸ್ಥಿತರಿದ್ದರು.
ಹಿಂದಿ ಭಾಷಾ ಮುಖ್ಯಸ್ಥ ವಿನಾಯಕ ಜೋಗ್ ಬಹುಮಾನ ವಿತರಣಾ ಕಾರ್ಯಕ್ರಮವನ್ನು
ನಡೆಸಿಕೊಟ್ಟರು.
ಡಾ. ಬಿ ಗಣನಾಥ ಶೆಟ್ಟಿ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕನ್ನಡ ಭಾಷಾ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ನಿರೂಪಿಸಿ ವಂದಿಸಿದರು.





















