ಪ.ಬಂಗಾಳ ಮೂಲದ ಯುವತಿ ಸಾಮೂಹಿಕ ಅತ್ಯಾಚಾರ : ರಿಕ್ಷಾ ಚಾಲಕ ಸಹಿತ ಮೂವರ ಬಂಧನ!
ಉಳ್ಳಾಲ: ಗೆಳೆಯನೊಂದಿಗೆ ಜಗಳ ನಡೆಸಿ, ರಿಕ್ಷಾ ಚಾಲಕನೊಂದಿಗೆ ಗೆಳೆತನ ನಡೆಸಿದ ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ತೀರ ಸಮೀಪ ಎ.17 ರ ತಡರಾತ್ರಿ 1.30 ಸುಮಾರಿಗೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು, ಮುಲ್ಕಿ ಹಾಗೂ ಕುಂಪಲ ನಿವಾಸಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮುಲ್ಕಿ ನಿವಾಸಿ 10 ವರ್ಷಕ್ಕಿಂತ ಹೆಚ್ಚು ಕಾಲ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರಭುರಾಜ್ (38),. ಇಲೆಕ್ಟ್ರಿಷಿಯನ್ ಕಾರ್ಯನಿರ್ವಹಿಸುವ ಕುಂಪಲ ಮೂಲದ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮಣಿ(30) ಬಂಧಿತರು.
ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದ 20 ಹರೆಯದ ಯುವತಿ 2-3 ವರ್ಷಗಳಿಂದ ಕೇರಳದ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.
ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಗೆಳೆಯನ ಜೊತೆ ಎ.16 ರಂದು ಬೆಳಿಗ್ಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರ್ ಗೆ ಹೇಳುತ್ತಾಳೆ. ಆದರೆ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಹೋಗುತ್ತಾರೆ. ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು , ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ.
ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾಳೆ. ವೈದ್ಯಕೀಯ ವರದಿ ಬಂದ ಬಳಿಕ ಅತ್ಯಾಚಾರ ಆಗಿದೆ ಇಲ್ಲವೋ ಅನ್ನುವುದು ದೃಢಪಡಿಸಲಾಗುವುದು.
































